ವಿರಾಜಪೇಟೆ ಪೆರುಂಬಾಡಿಯಲ್ಲಿ ದರೋಡೆಕೋರರ ಬಂಧನ : ತಪ್ಪಿದ ಭಾರೀ ಅನಾಹುತ

06/09/2020

ಮಡಿಕೇರಿ ಸೆ.6 : ದರೋಡೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕುತ್ತಿದ್ದ ಒಂಭತ್ತು ಮಂದಿಯನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಮುಂಜಾನೆ ವಿರಾಜಪೇಟೆ ಬಳಿಯ ಪೆರುಂಬಾಡಿ ಎಂಬಲ್ಲಿ ಎರಡು ಕಾರುಗಳಲ್ಲಿ ದರೋಡೆಕೋರರು ನಿಂತಿದ್ದ ಬಗ್ಗೆ ಮಾಹಿತಿ ದೊರೆತ ತಕ್ಷಣ ವಿರಾಜಪೇಟೆ ನಗರ ಠಾಣೆಯ ಪಿಎಸ್‍ಐ ಹೆಚ್.ಎಸ್.ಬೋಜಪ್ಪ ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದರು. ಈ ಸಂದರ್ಭ ಆರೋಪಿಗಳು ಪರಾರಿಯಾಗಲು ಯತ್ನಸಿದರಾದರೂ ಹಿಮ್ಮೆಟ್ಟಿಸಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು.
ಮೈಸೂರಿನ ವೃಂದಾವನ ಬಡಾವಣೆಯ ವಾದಿರಾಜ್, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿಯ ವಿ.ನಾರಾಯಣಸ್ವಾಮಿ, ಬೆಂಗಳೂರಿನ ಹೆಣ್ಣೂರು ರಸ್ತೆ ನಿವಾಸಿ ಜಾನ್ ಪೌಲ್, ಬೆಂಗಳೂರಿನ ವಿದ್ಯಾರಣ್ಯಪುರಂ ನಿವಾಸಿ ಜ್ಞಾನೇಂದ್ರ ಪ್ರಸಾದ್, ಕೇರಳದ ಚರಕಲ್ ನಿವಾಸಿ ಕೆ.ವಿ.ಅಭಿನವ್, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೆಬ್ಬೆಹಳ್ಳಿ ನಿವಾಸಿ ಸತೀಶ್, ತಮಿಳುನಾಡಿನ ಹೊಸೂರು ನಿವಾಸಿ ಸುರೇಶ್, ಕೇರಳದ ಕೋಯಿಕ್ಕೋಡ್ ಜಿಲ್ಲೆಯ ವಡಗರ ನಿವಾಸಿ ವೈಷ್ಣವ್ ಹಾಗೂ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ನಿವಾಸಿ ಪುರುಷೋತ್ತಮ ಎಂಬುವವರುಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ ಮೂರು ಕಬ್ಬಿಣದ ಸಲಾಕೆ, ತಲಾ ಒಂದು ಚಾಕು ಮತ್ತು ಲಾಂಗ್ ಮಚ್ಚು, ಎರಡು ತಲ್ವಾರ್, ಖಾರದ ಪುಡಿ, ಸುಮಾರು ಎಂಟು ಕೆ.ಜಿ. ಯಷ್ಟು ಪಾದರಸ ಹಾಗೂ ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ವಿರಾಜಪೇಟೆ ಪೊಲೀಸರು ಭಾರೀ ಸಂಚಿನ ಕುರಿತು ತನಿಖೆ ಕೈಗೊಂಡಿದ್ದಾರೆ. ಪೊಲೀಸರ ಸಮಯ ಪ್ರಜ್ಞೆಯಿಂದ ದರೋಡೆಕೋರರು ಸೆರೆಯಾಗಿದ್ದು, ನಡೆಯಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತ್ತಾಗಿದೆ.
::: ಓರ್ವನಿಗೆ ಕೋವಿಡ್ :::
ಬಂಧಿತರಲ್ಲಿ ಓರ್ವನಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದ್ದು, ಆತನನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಠಾಣಾದಿಕಾರಿ ಬೋಜಪ್ಪ, ಸಿಬ್ಬಂದಿಗಳಾದ ಎನ್.ಸಿ.ಲೋಕೇಶ್, ಮುಸ್ತಫಾ, ಸಂತೋಷ್, ಗಿರೀಶ್, ಮಧು, ಮುನೀರ್, ರಜನ್, ಲೋಹಿತ್, ಮಲ್ಲಿಕಾರ್ಜುನ ಹಾಗೂ ಚಾಲಕ ಯೋಗೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.