ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ವಿವಾದ ಸೃಷ್ಟಿ ವಿಷಾದಕರ : ಬ್ರಾಹ್ಮಣರ ಸಂಘ ಬೇಸರ

07/09/2020

ಮಡಿಕೇರಿ ಸೆ.7 : ಪವಿತ್ರ ತಲಕಾವೇರಿ ಕ್ಷೇತ್ರದಲ್ಲಿ ಗಜಗಿರಿ ಬೆಟ್ಟ ಕುಸಿದು ಅನಾಹುತ ಸಂಭವಿಸಿದ ನಂತರದ ದಿನಗಳಲ್ಲಿ ಪರ, ವಿರೋಧ ಹೇಳಿಕೆಗಳ ಮೂಲಕ ಹಿಂದೂ ಧರ್ಮದ ಧಾರ್ಮಿಕತೆಯ ಬಗ್ಗೆ ರಾಜ್ಯ ಮಟ್ಟದಲ್ಲಿ ಬಹಿರಂಗ ಚರ್ಚೆಗೆ ಅವಕಾಶ ಕಲ್ಪಿಸಿ ಕೊಟ್ಟಿರುವುದು ಸರಿಯಾದ ಕ್ರಮವಲ್ಲವೆಂದು ಕೊಡಗು ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಾ.ಮಹಾಭಲೇಶ್ವರ ಭಟ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ತಲಕಾವೇರಿ ಕ್ಷೇತ್ರದಲ್ಲಿ ಮುಂದೆ ಆಗಬೇಕಾಗಿರುವ ಉತ್ತಮ ಕಾರ್ಯಗಳ ಬಗ್ಗೆ ಚರ್ಚಿಸದೆ ಆರೋಪ, ಪ್ರತ್ಯಾರೋಪಗಳ ಮೂಲಕ ವಿವಾದವನ್ನು ಸೃಷ್ಟಿಸುತ್ತಿರುವುದು ವಿಷಾದಕರ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.
ತಲಕಾವೇರಿ ಕ್ಷೇತ್ರದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ನಾರಾಯಣ ಆಚಾರ್ ಅವರ ನಿಧನದ ನಂತರ ಅವರನ್ನು ವೈಯುಕ್ತಿಕವಾಗಿ ನಿಂದಿಸುತ್ತಿರುವುದು ಮತ್ತು ಉಳಿದ ಬ್ರಾಹ್ಮಣರನ್ನು ಅವಹೇಳನ ಮಾಡುತ್ತಿರುವುದು ಖಂಡನೀಯ. ನಾರಾಯಣ್ ಆಚಾರ್ ಅವರು ಪೂಜಾ ಕೈಂಕರ್ಯದಲ್ಲಿ ತಪ್ಪು ಎಸಗಿದ್ದರೆ ಅಥವಾ ನಿಯಮ ಬಾಹಿರ ಕಾರ್ಯವನ್ನು ಮಾಡಿದ್ದರೆ ಅವರನ್ನು ಈ ಹಿಂದೆಯೇ ಅರ್ಚಕ ವೃತ್ತಿಯಿಂದ ತೆಗೆದು ಹಾಕಿ ಕ್ರಮ ಕೈಗೊಳ್ಳಬಹುದಾಗಿತ್ತು. ಆದರೆ ಮರಣಾ ನಂತರ ನಾರಾಯಣ್ ಆಚಾರ್ ಮಾತ್ರವಲ್ಲದೆ ಇತರ ಬ್ರಾಹ್ಮಣರನ್ನು ಕೂಡ ಟೀಕೆಗೆ ಗುರಿ ಮಾಡುತ್ತಿರುವುದು ತೀವ್ರ ಬೇಸರವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.
ಮೂನ್ನೂರು ವರ್ಷಗಳ ಹಿಂದೆ ಕುಲಧರ್ಮ ಹಾಗೂ ಸ್ವಧರ್ಮ ಎರಡನ್ನೂ ತ್ಯಜಿಸಿ ತಲಕಾವೇರಿಯಲ್ಲಿ ಬ್ರಾಹ್ಮಣರಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಅಮ್ಮ ಕೊಡವರು ಇದೀಗ ಈ ಹಿಂದಿನಂತೆ ಪೂಜೆಯ ಹಕ್ಕನ್ನು ಬಿಟ್ಟು ಕೊಡುವಂತೆ ಕೇಳುತ್ತಿರುವುದು ಎಷ್ಟು ಸರಿ, ನಾವು ಪೂಜೆ ಮಾಡುವವರು ಎಂದು ಹೋರಾಡುತ್ತಿರುವ ಅಮ್ಮ ಕೊಡವರು ಕೊಡಗಿನ ಮೂರು ಸಾವಿರಕ್ಕಿಂತಲೂ ಹೆಚ್ಚು ದೇವಾಲಯಗಳ ಪೈಕಿ ಎಷ್ಟು ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಡಾ.ಮಹಾಭಲೇಶ್ವರ ಭಟ್ ಪ್ರಶ್ನಿಸಿದ್ದಾರೆ.
ಸನಾತನ ಹಿಂದೂ ಧರ್ಮದ ಪ್ರಕಾರ ಬ್ರಹ್ಮ ಕುಲದವರೇ ಅರ್ಚಕ ವೃತ್ತಿಗೆ ಸಮರ್ಥರು ಎನ್ನುವ ಧರ್ಮಾಧಾರವಿದೆ. ತಲಕಾವೇರಿ ಕ್ಷೇತ್ರ ಅಭಿವೃದ್ಧಿಯಾಗುವ ಮೊದಲು ಆದಾಯದ ಕೊರತೆ ಇದ್ದಾಗ ಮತ್ತು ಅತ್ಯಂತ ಕಷ್ಟಕಾಲದಲ್ಲಿ ಧರ್ಮ ಕ್ಷೇತ್ರವನ್ನು ಜೀವಂತವಾಗಿಸಿರಿಸಿಕೊಂಡು, ಕ್ಷೇತ್ರವನ್ನು ಬೆಳೆಸಿಕೊಂಡು ಬರಲು ಬ್ರಾಹ್ಮಣ ಸುಮುದಾಯ ದೊಡ್ಡ ಕೊಡುಗೆಯನ್ನೇ ನೀಡಿದೆ.
ಅಮ್ಮ ಕೊಡವರೇ ಅರ್ಚಕರಾಗಬೇಕು ಮತ್ತು ಪೂಜಾ ಕೈಂಕರ್ಯಗಳನ್ನು ನಡೆಸಬೇಕೆನ್ನುವ ಬೇಡಿಕೆಗೆ ಬೆಂಬಲ ಸೂಚಿಸುವವರು ಅವರವರ ಗ್ರಾಮದ ದೇವಾಲಯಗಳಲ್ಲಿ ಸ್ಥಳೀಯ ಅಮ್ಮ ಕೊಡವರನ್ನು ಅರ್ಚಕರನ್ನಾಗಿ ನೇಮಿಸಲು ಒಪ್ಪುತ್ತಾರೆಯೇ ಎಂದು ಪ್ರಶ್ನಿಸಿರುವ ಡಾ.ಮಹಾಭಲೇಶ್ವರ ಭಟ್, ಹುರುಳಿಲ್ಲದ ಚರ್ಚೆಯನ್ನು ಮಾಡದಿರುವಂತೆ ಸಲಹೆ ನೀಡಿದ್ದಾರೆ.
ಪೂಜಾಕೈಂಕರ್ಯದಲ್ಲಿ ಸಮರ್ಥ ಪಾಂಡಿತ್ಯ ಹೊಂದಿರುವ ಅರ್ಚಕರನ್ನು ತಲಕಾವೇರಿ ಕ್ಷೇತ್ರದಲ್ಲಿ ನೇಮಿಸಬೇಕು ಮತ್ತು ಮುಜರಾಯಿ ಇಲಾಖೆಯ ಮೂಲಕವೇ ಸಂಪೂರ್ಣ ನಿರ್ವಹಣೆಯಾಗಬೇಕು ಎಂದು ಅವರು ತಿಳಿಸಿದ್ದಾರೆ.
ಗಜಗಿರಿ ಬೆಟ್ಟ ಕುಸಿದು ಮೃತಪಟ್ಟ ಯುವ ಅರ್ಚಕರಾದ ರವಿಕಿರಣ್ ಹಾಗೂ ಶ್ರೀನಿವಾಸ್ ಅವರುಗಳ ಬಡ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದ್ದು, ಸರ್ಕಾರ ಹೆಚ್ಚಿನ ಮೊತ್ತದ ಪರಿಹಾರ ಧನವನ್ನು ನೀಡಬೇಕೆಂದು ಡಾ.ಮಹಾಭಲೇಶ್ವರ ಭಟ್ ಒತ್ತಾಯಿಸಿದ್ದಾರೆ.