ಕಂದಾಯ ಇಲಾಖೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸಿ : ಸೇವ್ ಕೊಡಗು ವೇದಿಕೆ ಒತ್ತಾಯ

07/09/2020

ಮಡಿಕೇರಿ ಸೆ.7 : ಕೊಡಗಿನ ಕಂದಾಯ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿರುವ ಸೇವ್ ಕೊಡಗು ವೇದಿಕೆಯ ಪ್ರಮುಖರು, ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ನಿತ್ಯ ಕಂದಾಯ ಕಚೇರಿಗೆ ಅಲೆಯುತ್ತಿರುವ ಸಾರ್ವಜನಿಕರು, ಕೃಷಿಕರು, ಬೆಳೆಗಾರರು, ಸರ್ಕಾರದ ಸೌಲಭ್ಯ ಪಡೆಯಲಿಚ್ಛಿಸಿರುವ ಫಲಾನುಭವಿಗಳು ತೊಂದರೆಯಲ್ಲಿ ಸಿಲುಕಿದ್ದಾರೆ ಎಂದು ಕೆ.ಬಿ.ಮಧು ಬೋಪಣ್ಣ, ಬಿ.ಎಂ.ಜಿನ್ನು ನಾಣಯ್ಯ, ಎನ್.ಉದಯಶಂಕರ್, ಎಂ.ಮನು ಮಹೇಶ್, ಕೆ.ರಮೇಶ್ ಮುದ್ದಯ್ಯ ಹಾಗೂ ಪಿ.ಜೆ.ನರೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿ ಕಡತಗಳನ್ನು ವಿಲೇವಾರಿ ಮಾಡದೆ ಅಸಡ್ಡೆ ತೋರುತ್ತಿರುವುದರಿಂದ ಜನಸಾಮಾನ್ಯರು ಸಂಕಷ್ಟ ಪಡುವಂತ್ತಾಗಿದೆ. 2013ರಲ್ಲಿ ಭಾರತದ ರಾಷ್ಟ್ರಪತಿಗಳಿಂದÀ ಅಂಕಿತಗೊಂಡ ಕಾಯ್ದೆ ಇನ್ನೂ ಅನುಷ್ಠಾನಗೊಳ್ಳದೆ ಬಾಣೆ ಹಿಡುವಳಿದಾರರು ಬಳಲುತ್ತಿದ್ದಾರೆ. ಈ ಕಾಯ್ದೆಯ ಪ್ರಕಾರ ಕಂದಾಯಕ್ಕೆ ಒಳಪಡದ ಎಲ್ಲಾ ಬಾಣೆ ಜಾಗಗಳನ್ನು ಕಂದಾಯಕ್ಕೆ ತರಲು ಆದೇಶಿಸಲಾಗಿದೆ. ಆದರೆ ಜಿಲ್ಲಾಡಳಿತ ಇಲ್ಲಿಯವರೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು.
ಜಮೀನಿನಲ್ಲಿರುವ ಪೌತಿ ಖಾತೆಯನ್ನು ತೆಗೆದು ಸಂಬಂಧಪಟ್ಟವರ ಹೆಸರಿಗೆ ಖಾತೆ ವರ್ಗಾವಣೆ ಮಾಡಲು ಅರ್ಜಿ ಸಲ್ಲಿಸಿದ್ದರೂ ಖಾತೆ ವರ್ಗಾವಣೆಯಾಗುತ್ತಿಲ್ಲ. ಕಂದಾಯ ಇಲಾಖೆಯಲ್ಲಿ ವಿಚಾರಿಸಿದರೆ ಇಲ್ಲಸಲ್ಲದ ನಿಯಮಗಳನ್ನು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಪ್ರಮುಖರು ಕರ್ನಾಟಕ ಸರಕಾರದ ಕಂದಾಯ ಸಚಿವರು ಇತ್ತೀಚಿಗೆ ಪೌತಿ ಖಾತೆಗಳನ್ನು ತೆಗೆದು ಹಾಕಿ ಖಾತೆ ಬದಲಾವಣೆಗೆ ಆದೇಶಿಸಿರುತ್ತಾರೆ. ಈ ಆದೇಶವನ್ನು ಕೊಡಗಿನಲ್ಲಿ ತಕ್ಷಣ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಜಮೀನಿನ ಸರ್ವೆ ಮಾಡಿ ಕಂದಾಯಕ್ಕೆ ಒಳಪಡಿಸುವ ಸಂದರ್ಭದಲ್ಲಿ ದುರಸ್ತಿಪಡಿಸಿ ಆಕಾರಬಂಧ ತಯಾರಿಸಿ ಸರ್ವೆ ನಂಬರ್ ಕೊಡುವುದು ಕಂದಾಯ ಇಲಾಖೆಯ ಜವಾಬ್ದಾರಿಯಾಗಿದೆ. ಆದರೆ ದುರಸ್ತಿ ಮತ್ತು ಆಕಾರಬಂಧ ತಯಾರಿಸದೆ ಸರ್ವೆ ನಂಬರ್ ನಲ್ಲಿ ಪಿ1 ಮತ್ತು ಪಿ 2 ಎಂದು ಸೇರಿಸುತ್ತಿರುವುದರಿಂದ ಬೆಳೆಗಾರರು ಸರಕಾರಿ ಹಾಗೂ ಬ್ಯಾಂಕ್ ಸಾಲ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲವೆಂದು ದೂರಿದರು.
ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಲಂಚ ನೀಡದೆ ಯಾವುದೇ ಕಡತಗಳು ವಿಲೇವಾರಿಯಾಗುತ್ತಿಲ್ಲ. ಹಣ ನೀಡಿದರೆ ಬಾಣೆ ಜಮೀನು ಕಂದಾಯಕ್ಕೆ ಒಳಪಡುತ್ತದೆ ಮತ್ತು ಪೌತಿ ಖಾತೆಯನ್ನು ತೆಗೆದು ಖಾತೆ ಬದಲಾವಣೆಯಾಗುತ್ತದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಮತ್ತು ಕಡತಗಳು ದಲ್ಲಾಳಿಗಳ ಮೂಲಕವೇ ವಿಲೇವಾರಿಯಾಗುವ ಅಲಿಖಿತ ನಿಯಮ ಜಾರಿಯಲ್ಲಿದ್ದಂತ್ತಿದೆ. ಸಾಮಾನ್ಯ ಜನರು ನಿಯಮನುಸಾರ ಸಲ್ಲಿಸಿದ ಅರ್ಜಿಗಳು ಮತ್ತು ಕಡತಗಳು ವಿಲೇವಾರಿಯಾಗದೆ ದೂಳು ಹಿಡಿಯುತ್ತಿವೆ ಎಂದು ಗಂಭೀರ ಆರೋಪ ಮಾಡಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದ ದಾಖಲೆಗಳನ್ನು ಸರಿಪಡಿಸಲು ದಲ್ಲಾಳಿಗಳು ಒಂದು ಎಕರೆಗೆ ರೂ.50 ಸಾವಿರ ಕಮಿಷನ್ ಪಡೆಯುತ್ತಿದ್ದು, ಇದರಲ್ಲಿ ಸಿಬ್ಬಂದಿಗಳಿಗೆ ಎಷ್ಟು ಪಾಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ತಕ್ಷಣ ಜಿಲ್ಲಾಧಿಕಾರಿಗಳು ಎಚ್ಚೆತ್ತುಕೊಂಡು ದಲ್ಲಾಳಿಗಳ ಹಾವಳಿಯನ್ನು ನಿಲ್ಲಿಸಬೇಕು, ಕಂದಾಯ ಇಲಾಖೆಯನ್ನು ಲಂಚ ಮುಕ್ತಗೊಳಿಸಿ ಜನಸ್ನೇಹಿ ಇಲಾಖೆಯನ್ನಾಗಿ ಪರಿವರ್ತಿಸಬೇಕೆಂದು ಮನವಿ ಮಾಡಿದರು.
ಕೊಡಗು ಜಿಲ್ಲೆ ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿಯಿಂದ ತತ್ತರಿಸಿ ಹೋಗಿದೆ. ಪ್ರಸ್ತುತ ವರ್ಷ ಸುರಿದ ಮಹಾಮಳೆಯಿಂದಲೂ ಅಪಾರ ಪ್ರಮಾಣದ ಬೆಳೆಹಾನಿಯಾಗಿದ್ದು, ಬೆಳೆಗಾರರಿಗೆ ಗರಿಷ್ಠ ಪ್ರಮಾಣದ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಕೊವೀಡ್ ಆತಂಕ ಇನ್ನೂ ದೂರವಾಗದೆ ಇರುವುದರಿಂದ ರೈತರು ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವುದು ಕಷ್ಟ ಸಾಧ್ಯವಾಗುತ್ತಿದೆ. ಆದ್ದರಿಂದ ಕಳೆದ ವರ್ಷದ ಅರ್ಜಿಯನ್ನೇ ಪರಿಗಣಿಸಿ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು. ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟವನ್ನು ರೂಪಿಸುವುದಾಗಿ ಪ್ರಮುಖರು ಎಚ್ಚರಿಕೆ ನೀಡಿದರು.