ಒಳ ಮೀಸಲಾತಿ ಜಾರಿಗೆ ದಲಿತ ಸಂಘರ್ಷ ಸಮಿತಿ ಒತ್ತಾಯ

07/09/2020

ಮಡಿಕೇರಿ ಸೆ.7 : ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸಬೇಕು ಮತ್ತು ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋ.ಬಿ. ಕೃಷ್ಣಪ್ಪ ಸ್ಥಾಪಿತ) ಕೊಡಗು ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿತು.
ಈ ಸಂದರ್ಭ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ, ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪೀಠವು ಇತ್ತೀಚೆಗೆ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದೆ ಎಂದರು.
ಪರಿಶಿಷ್ಟರನ್ನು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಉನ್ನತೀಕರಣಗೊಳಿಸಲು ಮೀಸಲಾತಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಪರಿಶಿಷ್ಟ ಜಾತಿಯಲ್ಲಿನ ಬಲಿಷ್ಠ ಜಾತಿಗಳು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳಿಗೆ ಸಿಗಬೇಕಾದ ಮೀಸಲಾತಿಯನ್ನು ತಾವೇ ಕಬಳಿಸುತ್ತಿದ್ದು, ಒಳ ಮೀಸಲಾತಿ ಜಾರಿಯಾದರೆ ಸಾಮಾಜಿಕ ನ್ಯಾಯ ಸಿಗಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ದಲಿತ ಸಂಘರ್ಷ ಸಮಿತಿಯ ಹಲವು ವರ್ಷಗಳ ಹೋರಾಟದ ನಂತರ ಒಳಮೀಸಲಾತಿಯ ಕುರಿತು ಪರಿಶಿಷ್ಟ ಜಾತಿ, ಪಂಗಡಗಳ ಜಾತಿವಾರು ಸಮೀಕ್ಷೆ ನಡೆಸಿ ವರದಿಯನ್ನು ಸಲ್ಲಿಸಲು ನ್ಯಾಯಮೂರ್ತಿ ಏ.ಜೆ.ಸದಾಶಿವ ಆಯೋಗವನ್ನು ರಚನೆ ಮಾಡಿತ್ತು. ಆದರೆ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ಬಳಿಕವೂ ಜಾರಿ ವಿಳಂಬವಾಗುತ್ತಿದೆ ಎಂದು ಗಾಯತ್ರಿ ಟೀಕಿಸಿದರು.
ವಿಧಾನಸಭಾ ಅಧಿವೇಶನದಲ್ಲಿ ವಿಚಾರ ಮಂಡಿಸಿ ಒಳ ಮೀಸಲಾತಿಯನ್ನು ಜಾರಿಗೆ ತರುವ ಮೂಲಕ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕಾಗಿದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವ ಸಂದರ್ಭ ಸಮಿತಿಯ ಪ್ರಮುಖರಾದ ಬಿ.ಎನ್.ಮುದ್ದುರಾಜು, ರಾಕೇಶ್, ಶುಭ, ಲಲಿತ, ಮುತ್ತಿ, ಗಣೇಶ್, ರಾಜೇಶ್ವರಿ, ಮಂಜುನಾಥ್, ಸುಬ್ರಮಣಿ, ರಾಮ್‍ದಾಸ್ ಹಾಜರಿದ್ದರು.