ವೀರಯೋಧ ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆ ಅನಾವರಣ

ಮಡಿಕೇರಿ ಸೆ.7 : ಭಾರತ-ಪಾಕ್ ನಡುವಣ 1965ರ ಯುದ್ಧದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಹುತಾತ್ಮರಾದ ವೀರಯೋಧ ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಅತ್ಯಾಕರ್ಷಕ ಪ್ರತಿಮೆಯನ್ನು, ಅವರ 55ನೇ ಪುಣ್ಯ ಸ್ಮರಣೆಯ ದಿನವಾದ ಇಂದು ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿಯ ವೃತ್ತದಲ್ಲಿ ಅನಾವರಣಗೊಳಿಸಲಾಯಿತು.
ಅಜ್ಜಮಾಡ ಕುಟುಂಬಸ್ಥರು, ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ಸ್ಮಾರಕ ಟ್ರಸ್ಟ್ ಮತ್ತು ಕೊಡವ ಮಕ್ಕಡ ಕೂಡದ ಸಾಂಘಿಕ ಪ್ರಯತ್ನದ ಮೂಲಕ, ಯುವ ಸಮೂಹಕ್ಕೆ ಪ್ರೇರಕ ಶಕ್ತಿಯಾಗಲೆಂಬ ಆಶಯದೊಂದಿಗೆ ಕಂಚಿನ ಪ್ರತಿಮೆ ನಿರ್ಮಾಣಗೊಂಡಿದೆ. ಆರು ಮುಕ್ಕಾಲು ಅಡಿ ಎತ್ತರದ ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆಯನ್ನು ಏರ್ ಮಾರ್ಷಲ್ ಕೆ.ಸಿ. ನಂದಾ ಕಾರ್ಯಪ್ಪ(ನಿವೃತ್ತ) ಮತ್ತು ಸ್ಕ್ವಾ.ಲೀ. ದೇವಯ್ಯ ಅವರ ಪತ್ನಿ ಸುಂದರಿ ದೇವಯ್ಯ ಅವರು ಅನಾವರಣಗೊಳಿಸಿ, ಪುಷ್ಪಾರ್ಚನೆಯ ಮೂಲಕ ಗೌರವ ವಂದನೆಯನ್ನು ಸಲ್ಲಿಸಿದರು. ಈ ಸಂದರ್ಭ ದೇವಯ್ಯರ ಪುತ್ರಿ ಪ್ರೀತ ದೇವಯ್ಯ ಹಾಗೂ ಹಾಜರಿದ್ದ ಗಣ್ಯರು ವೀರಯೋಧನಿಗೆ ಗೌರವ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಏರ್.ಮಾರ್ಷಲ್ ಕೆ.ಸಿ.ಕಾರ್ಯಪ್ಪ( ನಿವೃತ್ತ) ಅವರು, ಸರಳ ಕಾರ್ಯಕ್ರಮದ ಐದೂವರೆ ದಶಕಗಳ ಹಿಂದೆ, ಇದೇ ದಿನದಂದು ಶತ್ರು ರಾಷ್ಟ್ರದ ಶಕ್ತಿ ಶಾಲಿ ಯುದ್ಧ ವಿಮಾನವನ್ನು ತಮ್ಮ ಮಿಸ್ಟಿ ಏರ್ ಕ್ರಾಫ್ಟ್ ಮೂಲಕ ಹೊಡೆದುರುಳಿಸಿ ಸಾಹಸ ಮೆರೆಯುವ ಮೂಲಕ ಸ್ಕ್ವಾಡರ್ನ್ ಲೀಡರ್ ದೇವಯ್ಯ ಅವರು ಅಸುನೀಗುತ್ತಾರೆ. ಇದು ಭಾರತ ಮಾತೆಗೆ ಅವರು ನೀಡಿರುವ ಪರಮೋಚ್ಛ ಬಲಿದಾನವೆಂದು ಸ್ಮರಿಸಿಕೊಂಡರು.
ತಮ್ಮ ಅತ್ಯುನ್ನತ ಸೇವಾ ಕಾರ್ಯಕ್ಕೆ ಮಹಾವೀರ ಚಕ್ರ ಪುರಸ್ಕಾರವನ್ನು ಪಡೆದ ಕೊಡಗಿನ ಇಬ್ಬರು ವೀರ ಪುತ್ರರಲ್ಲಿ ಸ್ಕ್ವಾಡರ್ನ್ ಲೀಡರ್ ದೇವಯ್ಯ ಅವರು ಒಬ್ಬರಾಗಿದ್ದು, ಮತ್ತೊಬ್ಬರು ಪುಟ್ಟಿಚಂಡ ಗಣಪತಿಯವರಾಗಿದ್ದಾರೆ. ರಾಷ್ಟ್ರ ರಕ್ಷಣೆಗಾಗಿ ಸಲ್ಲಿಸಿದ ಮಹೋನ್ನತ ಬಲಿದಾನವನ್ನು ಸ್ಮರಿಸಿಕೊಂಡು, ವೀರ ಯೋಧನ ಪ್ರತಿಮೆಯನ್ನು ಅನಾವರಣಗೊಳಿಸಿರುವುದು ಅತ್ಯಂತ ಶ್ಲಾಘನೀಯವೆಂದರು.
ಸ್ಕ್ವಾಡರ್ನ್ ಲೀಡರ್ ದೇವಯ್ಯ ಅವರ ಪತ್ನಿ ಅಜ್ಜಮಾಡ ಸುಂದರಿ ದೇವಯ್ಯ ಅವರು, ತಮ್ಮ ಪತಿಯ ಪ್ರತಿಮೆಯನ್ನು ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಲು ಕಾರಣಕರ್ತರಾದವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯರಾದ ಶಾತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ರಾಷ್ಟ್ರ ರಕ್ಷಣೆಗಾಗಿ ಸೇವೆ ಸಲ್ಲಿಸಿದವರು, ಬಲಿದಾನಗೈದವರ ಪ್ರತಿಮೆಯನ್ನು ಸ್ಥಾಪಿಸುವ ಅತ್ಯಂತ ಕ್ಲಿಷ್ಟಕರವಾದ ಕಾರ್ಯವನ್ನು ಅಜ್ಜಮಾಡ ಕುಟುಂಬಸ್ಥರು, ಕೊಡವ ಮಕ್ಕಡ ಕೂಟ, ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ಸ್ಮಾರಕ ಟ್ರಸ್ಟ್ ಮಾಡಿದ್ದು, ಇದಕ್ಕೆ ಮಡಿಕೇರಿ ನಗರಸಭೆಯ ಎಲ್ಲ ಜನಪ್ರತಿನಿಧಿಗಳನ್ನು ಅಭಿನಂದಿಸುವುದಾಗಿ ತಿಳಿಸಿ, ಪ್ರತಿಮೆ ಸ್ಥಾಪಿಸುವ ಪ್ರಯತ್ನಗಳ ಸಂದರ್ಭ ಸಾಕಷ್ಟು ಪರ ವಿರೋಧಗಳು ಇದ್ದಿತಾದರು, ನಗರಸಭೆಯ ಜನಪ್ರತಿನಿಧಿಗಳು ಒಮ್ಮತದ ನಿರ್ಣಯ ಕೈಗೊಳ್ಳುವ ಮೂಲಕ ಪ್ರತಿಮೆ ಸ್ಥಾಪನೆಗೆ ಅವಕಾಶ ಕಲ್ಪಿಸಿಕೊಟ್ಟರೆಂದು ಸ್ಮರಿಸಿದರು.
ಕೊಡಗು ಸೇನಾನಿಗಳ ನಾಡಾಗಿದ್ದು, ದೇಶಕ್ಕೆ ಸೇವೆ ಸಲ್ಲಿಸಿದ ಮಹಾನ್ ಚೇತನಗಳ ಪ್ರತಿಮೆ, ಪುತ್ಥಳಿಗಳು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾಗುವ ಮೂಲಕ, ಯುವ ಸಮುದಾಯದಲ್ಲಿ ಸ್ಫೂರ್ತಿಯನ್ನು ತುಂಬುವಂತಾಗಲೆಂದು ಆಶಿಸಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷರಾದ ಕಂಡ್ರತಂಡ ಸಿ. ಸುಬ್ಬಯ್ಯ(ನಿವೃತ್ತ) ಅವರು ಮಾತನಾಡಿ, 1965 ರ ಸೆ.7 ರ ಇದೇ ದಿನದಂದು ಪಾಕಿಸ್ತಾನದ ಸರ್ಗೋದ ವಾಯು ನೆಲೆಯನ್ನು ಧ್ವಂಸ ಗೊಳಿಸಿದ ಭಾರತೀಯ ವಾಯುನೆಲೆಯ ವಿಮಾನಗಳಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಸ್ಕ್ವಾಡರ್ನ್ ಲೀಡರ್ ದೇವಯ್ಯ ಅವರು, ಪಾಕಿಸ್ತಾನದ ಎಫ್104 ಎನ್ನುವ ಶಕ್ತಿ ಶಾಲಿ ಯುದ್ಧ ವಿಮಾನದೊಂದಿಗೆ ತಾವು ಮುನ್ನಡೆಸುತ್ತಿದ್ದ ಸಾಧಾರಣವಾದ ಮಿಸ್ಟಿ ಏರ್ ಕ್ರಾಫ್ಟ್ ಮೂಲಕ ಯುದ್ಧ ನಡೆಸಿ, ತಮ್ಮ ವಿಮಾನದ ಎರಡು ರೆಕ್ಕೆಗಳಿಗೆ ಬೆಂಕಿ ತಗುಲಿದರು ಲೆಕ್ಕಿಸದೆ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ನಾಶ ಗೊಳಿಸುವುದರೊಂದಿಗೆ ತಾವೇ ಹುತಾತ್ಮರಾದರು. ಈ ಘಟನೆ ನಡೆದು 23 ವರ್ಷಗಳ ಬಳಿಕ ಕೇಂದ್ರ ಸರ್ಕಾರ ಸ್ಕ್ವಾ.ಲೀ. ದೇವಯ್ಯ ಅವರಿಗೆ ಮಹಾವೀರ ಚಕ್ರವನ್ನು ಪ್ರದಾನ ಮಾಡಿತೆಂದು ಸ್ಮರಿಸಿಕೊಂಡರು.
ಫೋರಂನ ಸಂಚಾಲ ಮೇಜರ್ ಬಿ.ಎ. ನಂಜಪ್ಪ (ನಿವೃತ್ತ) ಮಾತನಾಡಿ, 1932 ರಲ್ಲಿ ಜನಿಸಿದ ಅಜ್ಜಮಾಡ ದೇವಯ್ಯ ಅವರು, 33 ರ ತಮ್ಮ ಕಿರಿಯ ವಯಸ್ಸಿನಲ್ಲೆ ಭಾರತ -ಪಾಕ್ ಯುದ್ಧದಲ್ಲಿ ಪಾಲ್ಗೊಂಡು ಅಪ್ರತಿಮ ಸಾಹಸ ಮೆರೆಯುವ ಮೂಲಕ ಹುತಾತ್ಮರಾದರು, ಅವರು ಕೊಡಗಿನ ಅಭಿಮನ್ಯುವೇ ಆಗಿದ್ದಾರೆ. ಅವರ ಸಾಹಸಗಾಥೆಯನ್ನು ಯುವ ಸಮೂಹ ಅರಿಯಬೇಕು ಮತ್ತು ಅಂತಹ ವೀರ ಯೋಧರು ಹೆಚ್ಚು ಹೆಚ್ಚಾಗಿ ಈ ನೆಲದಿಂದ ಮೂಡಿ ಬರಬೇಕೆನ್ನುವ ಆಶಯವನ್ನು ವ್ಯಕ್ತಪÀಡಿಸಿದರು.
ಅಜ್ಜಮಾಡ ಕುಟುಂಬದ ಅಧ್ಯಕ್ಷ ಲವ ಕುಶಾಲಪ್ಪ ಅವರು ಮಾತನಾಡಿ, ವೀರಯೋಧ ಸ್ಕ್ವಾ.ಲೀ. ದೇವಯ್ಯ ಅವರ ಅಪ್ರತಿಮ ಸಾಹಸ, ದೇಶಕ್ಕಾಗಿ ಸಲ್ಲಿಸಿದ ಬಲಿದಾನವನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳುವಂತಾಗಬೇಕು ಎಂದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ಯುವ ಸಮೂಹಕ್ಕೆ ಪ್ರೇರಣಾದಾಯಕರಾಗಿದ್ದಾರೆ. ಇಂತಹ ಮಹಾನ್ ವೀರ ಯೋಧನ ಪ್ರತಿಮೆ ಸ್ಥಾಪನೆಗೆ ವಿರೋಧ ಮಾಡುವಂತಹವರು ನಮ್ಮ ನಡುವೆಯೇ ಇದ್ದಾರೆ. ಅಂತಹವರ ಬಗ್ಗೆ ಎಚ್ಚರಿಕೆ ಅಗತ್ಯವೆಂದು ತಿಳಿಸಿದರು. ಇದೇ ಸಂದರ್ಭ ಅವರು ಪ್ರತಿಮೆ ಸ್ಥಾಪನೆಗೆ ಶ್ರಮಿಸಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪರಿಗೆ ವೈಯಕ್ತಿಕವಾಗಿ 25 ಸಾವಿರ ರೂ.ಗಳ ಚೆಕ್‍ನ್ನು ಹಸ್ತಾಂತರಿಸಿದರು.
ಸ್ಕ್ವಾಡರ್ನ್ ಲೀಡರ್ ದೇವಯ್ಯ ಅವರ ಜೊತೆಯಲ್ಲಿ ಕಾರ್ಯನಿರ್ವಹಿಸಿದ್ದ ಭಾರತೀಯ ವಾಯುದಳದ ನಿವೃತ್ತ ಅಧಿಕಾರಿ ಸುಳ್ಯದ ದೇವಣ್ಣ ಗೌಡ ಮಾತನಾಡಿ, ಭಾರತ-ಪಾಕ್ ಯುದ್ಧದ ಘಟನೆಯನ್ನು ಸ್ಮರಿಸಿಕೊಂಡು, 1965ರ ಸೆ.7 ರಂದು ಸ್ಕ್ವಾ.ಲೀ.ದೇವಯ್ಯ ಅವರು ತಮ್ಮ ಮಿಸ್ಟಿ ಏರ್ ಕ್ರಾಫ್ಟ್‍ನಲ್ಲಿಯುದ್ಧಕ್ಕೆ ತೆರಳುವುದಕ್ಕೂ ಮುನ್ನ ತಾನು ಅವರಿಗೆ ಸಲ್ಲಿಸಿದ ಕೊನೆಯ ಸೆಲ್ಯೂಟ್ ಇಂದಿಗೂ ನನ್ನ ಮನದಲ್ಲಿ ಹಸಿರಾಗಿ ಉಳಿದಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿ ನಗರಸಭಾ ಆಯುಕ್ತ ರಾಮದಾಸ್, ನಿವೃತ್ತ ವಾಯು ಸೇನಾ ಅಧಿಕಾರಿಗಳಾದ ಬಾಳೆಯಂಡ ಮಂದಪ್ಪ, ಕಾಳಿಮಾಡ ರಾಣ ಮಾತನಾಡಿದರು.
::: ಸನ್ಮಾನ :::
ಇದೇ ಸಂದರ್ಭ ಸ್ಕ್ವಾ.ಲೀ. ದೇವಯ್ಯ ಅವರ ಪತ್ನಿ ಅಜ್ಜಮಾಡ ಸುಂದರಿ ದೇವಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ, ಪ್ರತಿಮೆಯನ್ನು ರಚಿಸಿದ ಶಿಲ್ಪಿ ಅಶೋಕ್ ಗುಡಿಗಾರ್ ಮತ್ತು ಗುತ್ತಿಗೆದಾರ ಅಜ್ಜಮಾಡ ಸುಮನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾದೇಟಿರ ಪ್ರಮೀಳಾ ಜೀವನ್ ಪ್ರಾರ್ಥಿಸಿ, ಕೊಡವ ಮಕ್ಕಡ ಕೂಡದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.




