ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ : ಅರ್ಜಿ ಆಹ್ವಾನ

ಮಡಿಕೇರಿ ಸೆ.7 : ನಾವೀನ್ಯತೆ ಕ್ಷೇತ್ರ 2, ತಾರ್ಕಿಕ 2, ಕ್ರೀಡೆ-2, ಕಲೆ, ಸಾಂಸ್ಕøತಿಕ ಮತ್ತು ಸಂಗೀತ – 2 ಈ 4 ವಿಭಾಗದಲ್ಲಿ ತಲಾ 2 ರಂತೆ ಒಟ್ಟು 8 ಪ್ರಶಸ್ತಿಗಳನ್ನು ನೀಡಲಾಗುವುದು. ಅಸಾಧಾರಣ ಸಾಧನೆ ಮಾಡಿ ಪ್ರತಿಭೆ ತೋರಿರುವ 5 ರಿಂದ 18 ವರ್ಷದೊಳಗಿನ (ಜುಲೈ 31ಕ್ಕೆ) ಮಕ್ಕಳನ್ನು 2020-21ನೇ ಸಾಲಿಗೆ ಜಿಲ್ಲಾ ಮಟ್ಟದ ಪ್ರತಿಭಾಪುರಸ್ಕಾರ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುವುದು. ಈ ಜಿಲ್ಲಾ ಮಟ್ಟದ ಪ್ರಶಸ್ತಿಯು ಪ್ರಶಸ್ತಿ ಪತ್ರ ಹಾಗೂ ರೂ.10 ಸಾವಿರ ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
ಈ ಪ್ರಶಸ್ತಿಗೆ ಆಯ್ಕೆಯಾಗುವಂತಹ ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿದ್ದು, ಮೇಲಿನ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಅಸಾಧಾರಣವೆಂದು ಗುರುತಿಸಲು ಅವರ ಸಾಧನೆಯ ಬಗ್ಗೆ ದಿನಪತ್ರಿಕೆಗಳಲ್ಲಿ ವರದಿಯಾಗಿರಬೇಕು ಅಥವಾ ಸಂಬಂಧಪಟ್ಟ ಕ್ಷೇತ್ರದ ತಜ್ಞರಿಂದ ಪರೀಕ್ಷಿಸಿರಬೇಕು. ಮಕ್ಕಳ ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ಈ ಹಿಂದೆ ಯಾವುದಾದರೂ ವರ್ಷದಲ್ಲಿ ಅರ್ಜಿ ಪ್ರಶಸ್ತಿಗೆ ಪರಿಗಣಿಸಲ್ಪಟ್ಟಿದ್ದಲ್ಲಿ, ಪುನಃ ಅದನ್ನು ಪರಿಗಣಿಸಲಾಗುವುದಿಲ್ಲ.
2020-21ನೇ ಸಾಲಿನ ಪ್ರಶಸ್ತಿಗೆ ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಉಪ ನಿರ್ದೇಶಕರ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಡಗು ಜಿಲ್ಲೆ ಇಲ್ಲಿಂದ ಪಡೆದು ದ್ವಿಪ್ರತಿಯಲ್ಲಿ ಭರ್ತಿ ಮಾಡಿದ ಅರ್ಜಿಗಳೊಂದಿಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪ್ರಸ್ತಾವನೆಯನ್ನು ಅಕ್ಟೋಬರ್, 05 ರೊಳಗೆ ಉಪನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‍ಗೇಟ್, ಮೈಸೂರು ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ ಈ ಕಚೇರಿಗೆ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗೆ ದೂ.ಸಂ.9482194105, 9481469149 ನ್ನು ಸಂಪರ್ಕಿಸಬಹುದು ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.