ಕೊಡಗು ಯುವ ಜೆಡಿಎಸ್ ಸಭೆ : ಸಂಕಷ್ಟದಲ್ಲಿರುವವರ ಸಮಸ್ಯೆಗಳಿಗೆ ಸ್ಪಂದಿಸಲು ಕರೆ

07/09/2020

ಮಡಿಕೇರಿ ಸೆ.7 : ಯುವ ಕಾರ್ಯಕರ್ತರು ಜಾತಿ, ಮತ, ಭೇದ ಮರೆತು ಸಂಕಷ್ಟದಲ್ಲಿರುವವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜಾತ್ಯತೀತ ಜನತಾದಳ ಸದಾ ಜನಸಾಮಾನ್ಯರೊಂದಿಗಿದೆ ಎನ್ನುವುದನ್ನು ಸಾಬೀತು ಪಡಿಸಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಕರೆ ನೀಡಿದ್ದಾರೆ.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಯುವ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಯುವ ಸಮೂಹ ಪಕ್ಷದಲ್ಲಿ ಸಕ್ರಿಯರಾಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಯುವ ಪಡೆಯೇ ಜೆಡಿಎಸ್ ಪಕ್ಷದ ಶಕ್ತಿಯಾಗಲಿದ್ದು, ದ್ವೇಷ ಮನೋಭಾವವನ್ನು ಬಿಟ್ಟು ಪ್ರತಿಯೊಬ್ಬರು ದೇಶ ಹಾಗೂ ಸಮಾಜದ ಏಳಿಗೆಗೆ ಶ್ರಮಿಸಬೇಕೆಂದರು. ಯುವಕರು ಸಾಮಾಜಿಕ ಹಿತಾಸಕ್ತಿ ಹೊಂದಿರಬೇಕು, ಜಿಲ್ಲೆಯಲ್ಲಿ ಶಾಂತಿಯ ವಾತಾವರಣವನ್ನು ಸೃಷ್ಟಿಸಿ ಎಲ್ಲರೂ ಒಗ್ಗಟ್ಟಿನಿಂದ ಬಾಳುವಂತಹ ವಾತಾವರಣ ಮೂಡಿಸಬೇಕು. ಈ ನಿಟ್ಟಿನಲ್ಲಿ ಪಕ್ಷದ ಯುವ ಕಾರ್ಯಕರ್ತರಿಂದ ಪರಿಣಾಮಕಾರಿ ಕೆಲಸಗಳು ನಡೆಯಬೇಕು ಎಂದು ಗಣೇಶ್ ಸಲಹೆ ನೀಡಿದರು.
ರಾಜ್ಯ ಉಪಾಧ್ಯಕ್ಷ ಡಾ.ಮನೋಜ್ ಬೋಪಯ್ಯ ಅವರು ಮಾತನಾಡಿ, ಜೆಡಿಎಸ್ ಯುವ ಕಾರ್ಯಕರ್ತರು ಪ್ರಬಲವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಡಿದ ಜನಪರ ಕಾರ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್ ಖಾನ್ ಮಾತನಾಡಿ, ರೈತರು ಹೇಗೆ ದೇಶದ ಬೆನ್ನೆಲುಬೋ ಹಾಗೆ ಯುವಕರು ಕೂಡ. ಇಂದಿನ ಯುವಕರು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದು, ಅದನ್ನು ಸದುಪಯೋಗಪಡಿಸಿಕೊಂಡು ಪಕ್ಷ ಸಂಘಟನೆ ಹಾಗೂ ಜನಸಾಮಾನ್ಯರಿಗೆ ಪಕ್ಷದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ, ಯುವ ಘಟಕ ನಿರೀಕ್ಷೆಗೂ ಮೀರಿ ಸಂಘಟನೆಯಾಗುತ್ತಿದ್ದು, ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು ನೀಡಿದ ಭರವಸೆಯಂತೆ ಯುವಕರಿಗೆ ನಾಯಕತ್ವವನ್ನು ನೀಡುವಲ್ಲಿ ಸಫಲರಾಗಿದ್ದಾರೆ. ಯುವಕರಿಗೆ ಸಲಹೆ ಸೂಚನೆಗಳನ್ನು ನೀಡಿ ರಾಜಕೀಯವಾಗಿ ಬೆಳೆಸುತ್ತಿದ್ದಾರೆ. ಅದರಂತೆಯೇ ಜೆಡಿಎಸ್ ಪಕ್ಷದ ಯುವ ಘಟಕದಿಂದ ಶಕ್ತಿಯುತವಾದ ಕೆಲಸಗಳು ಆಗಬೇಕು ಮತ್ತು ಸ್ಥಳೀಯವಾಗಿ ಒಗ್ಗೂಡಿ ಕೆಲಸ ಮಾಡಬೇಕು ಎಂದರು.
ಇದೇ ಸಂದರ್ಭ ಮಡಿಕೇರಿ ತಾಲ್ಲೂಕು ಯುವ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿಯಾಗಿ ನವನೀತ್ ಇಟ್ಟಣಿಕೆ, ಸಂಘಟನಾ ಕಾರ್ಯದರ್ಶಿ ಅಯ್ಯಂಡ್ರ ಸನತ್ ಮಂದಣ್ಣ, ಯುವ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಡಿ.ಎಂ.ಪೃಥ್ವಿ ಅಧಿಕಾರ ಸ್ವೀಕರಿಸಿದರು.
ಕುಶಾಲನಗರ (ಕಾವೇರಿ) ತಾಲ್ಲೂಕು ಅಧ್ಯಕ್ಷರನ್ನಾಗಿ ಕೆ.ಬಿ.ಫಾರೂಕ್, ಪೆÇನ್ನಂಪೇಟೆ ತಾಲ್ಲೂಕು ಅಧ್ಯಕ್ಷ ಕಾಣತಂಡ ಎನ್.ಜೀವನ್, ಸುಂಟಿಕೊಪ್ಪ ನಗರಾಧ್ಯಕ್ಷ ಪಿ.ಎ.ಇರ್ಷಾದ್, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷರನ್ನಾಗಿ ಶ್ರೀರಾಮ್ ವಿ.ಯಂಕನ ಅವರನ್ನು ಆಯ್ಕೆ ಮಾಡಲಾಯಿತು.
ಬಿಜೆಪಿ ಪಕ್ಷವನ್ನು ತೊರೆದ ಮಂಗಳಾದೇವಿ ನಗರದ ಚೇತನ್, ಪುಟಾಣಿ ನಗರದ ಸದಾನಂದ್, ಇಬ್ನವಳವಾಡಿಯ ನವೀನ್ ಅವರುಗಳು ಯುವ ಜೆಡಿಎಸ್ ಉಪಾಧ್ಯಕ್ಷ ದಿವಾಕರ್ ರೈ ಅವರ ನೇತೃತ್ವದಲ್ಲಿ ಜೆಡಿಎಸ್ ಗೆ ಸೇರ್ಪಡೆಗೊಂಡರು.
ಯುವ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಜಾಶಿರ್, ಜಿಲ್ಲಾ ಯುವ ವಕ್ತಾರ ಎನ್.ರವಿಕಿರಣ್, ಮಡಿಕೇರಿ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಬಾಡನ ಅಭಿತ್ ಅಪ್ಪಯ್ಯ, ವಕ್ತಾರ ಜಿನಾಸುದ್ದೀನ್, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಜಯ್, ಮಡಿಕೇರಿ ನಗರ ಯುವ ಘಟಕದ ಅಧ್ಯಕ್ಷ ಎಂ.ಮೋನಿಷ್, ಉಪಾಧ್ಯಕ್ಷ ಉಮೇಶ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.