ಮಳೆ ಹಾನಿ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ ತಂಡ

September 8, 2020

ಮಡಿಕೇರಿ ಸೆ. 8 : ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ಮಳೆ ಹಾನಿ ವೀಕ್ಷಿಸಲು ಕೇಂದ್ರ ಅಧ್ಯಯನ ತಂಡವು ಜಿಲ್ಲೆಗೆ ಮಂಗಳವಾರ ಆಗಮಿಸಿ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಮಳೆ ಹಾನಿಯಿಂದ ಉಂಟಾದ ನಷ್ಟದ ಬಗ್ಗೆ ಮಾಹಿತಿ ಪಡೆದರು.
ಕೂಡಿಗೆಯ ಸೈನಿಕ ಶಾಲೆಯ ಸಭಾಂಗಣದಲ್ಲಿ ಭಾರತ ಸರ್ಕಾರದ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್, ಭಾರತ ಸರ್ಕಾರದ ವಿತ್ತ ಸಚಿವಾಲಯದ ಡಾ.ಭಾತೇರ್ಂದು ಕುಮಾರ್ ಸಿಂಗ್ ಹಾಗೂ ಭಾರತ ಸರ್ಕಾರದ ಕೆ.ಎಸ್.ಡಿ.ಎಂ.ಎ. ಆಯುಕ್ತರಾದ ಮನೋಜ್ ರಂಜನ್ ಅವರನ್ನು ಒಳಗೊಂಡ ಕೇಂದ್ರ ಅಧ್ಯಯನ ತಂಡವು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಂದ ಮಾಹಿತಿ ಪಡೆದರು.
ಕೂಡಿಗೆಯ ಸೈನಿಕ ಶಾಲೆಯ ಸಭಾಂಗಣದಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಾನಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಕೇಂದ್ರ ಅಧ್ಯಯನ ತಂಡವು ವೀಕ್ಷಣೆ ಮಾಡಿದರು.
ಕೂಡಿಗೆಯ ಸೈನಿಕ ಶಾಲೆಯಲ್ಲಿ ಕೇಂದ್ರ ತಂಡದ ಮುಖ್ಯಸ್ಥರು ಮಳೆಯಿಂದ ಉಂಟಾದ ಜನ-ಜಾನುವಾರು, ಮನೆ, ಬೆಳೆ ಹಾನಿ ಹಾಗೂ ಭೂಕುಸಿತ ಬಗ್ಗೆ ಜಿಲ್ಲಾಧಿಕಾರಿ ಅವರಿಂದ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಪಿಪಿಟಿ ಮೂಲಕ ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ತಹಶೀಲ್ದಾರರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಇತರರು ಇದ್ದರು.

error: Content is protected !!