ತಲಕಾವೇರಿಯಲ್ಲಿ ಸರದಿ ಪ್ರಕಾರ ಅರ್ಚಕ ಸಮುದಾಯದಿಂದ ಪೂಜೆ ಆರಂಭ

08/09/2020

ಮಡಿಕೇರಿ ಸೆ. 8 : ಈ ತಿಂಗಳಿಂದಲೇ ತಲಕಾವೇರಿ ದೇವಸ್ಥಾನದಲ್ಲಿ ಸರದಿ ಪ್ರಕಾರ ಇನ್ನೋರ್ವ ಪ್ರಧಾನ ಅರ್ಚಕ ಶಂಕರ ಆಚಾರ್ ಅವರ ಪುತ್ರ ಗುರುರಾಜ ಆಚಾರ್ ಯಥಾ ಪ್ರಕಾರ ಸಂಪ್ರದಾಯಬದ್ಧವಾದ ಪೂಜಾ ವಿಧಾನಗಳನ್ನು ನಡೆಸುತ್ತಿದ್ದಾರೆ.
ಮಳೆ ಹಾಗೂ ಮಂಜು ಕವಿದ ವಿಪರೀತ ಚಳಿಯ ಈಗಿನ ಪ್ರತಿಕೂಲ ವಾತಾವರಣದಿಂದಾಗಿ 85ಕ್ಕೂ ವಯಸ್ಸಿನ ಹಿರಿಯ ಶಂಕರ್ ಆಚಾರ್ ಪ್ರಸ್ತುತ ಬರಲಾಗದ ಕಾರಣ ಮಗನನ್ನು ಕಳುಹಿಸಿ ಪರಂಪರಾಗತ ಪೂಜೆಯನ್ನು ಚ್ಯುತಿ ಬಾರದಂತೆ ನಡೆಸುತ್ತಿದ್ದಾರೆ. ಪ್ರಸ್ತುತ ಕುಸಿದು ಹೋದ ಪ್ರದೇಶದ ಅನತಿ ದೂರದಲ್ಲಿ ಬಹು ಎತ್ತರ ಪ್ರದೇಶದಲ್ಲಿ ಉಳಿದುಕೊಂಡಿರುವ ಇವರ ಮನೆ ಅಲ್ಲದೆ ಇನ್ನೋರ್ವ ಪ್ರಧಾನ ಅರ್ಚಕ ದಿ. ಶ್ರೀಪತಿ ಆಚಾರ್ ಅವರ ಮನೆ ಕೂಡ ಇದ್ದು ಇದೀಗ ಈ ಕುಟುಂಬದ ಎರಡು ಮನೆಗಳು ಉಳಿದಿವೆ ಎಂದು ಕುಟುಂಬದ ವಕ್ತಾರ ಜಯಪ್ರಕಾಶ್ ರಾವ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.