ಏಷ್ಯಾದ ಎರಡನೇ ಅತಿದೊಡ್ಡ ಏಕಶಿಲಾ ಬೆಟ್ಟ ಮಧುಗಿರಿ ಬೆಟ್ಟ

08/09/2020

ತುಮಕೂರು ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಸ್ಥಳ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ 107 ಕಿ.ಮೀ. ದೂರದಲ್ಲಿದೆ. ಇದು ಏಷ್ಯಾದ ಎರಡನೇ ಅತಿದೊಡ್ಡ ಏಕಶಿಲಾಬೆಟ್ಟವಾಗಿದೆ. ಇದು ಪಾವಗಡದಿಂದ ಬಳ್ಳಾರಿಯವರೆಗೆ ಹರಡಿರುವ ಪರ್ವತ ಶ್ರೇಣಿಯ ಭಾಗವಾಗಿದೆ. ಇಲ್ಲಿ 17ನೇ ಶತಮಾನದಲ್ಲಿ ನಿರ್ಮಾಣವಾದ ಕೋಟೆ ಇದೆ. ಇದು ಸಮುದ್ರ ಮಟ್ಟದಿಂದ 3985 ಅಡಿ (1193 ಮೀಟರ್)ಗಳಷ್ಟು ಎತ್ತರವಿದೆ. ಇದು ಒಂದು ಚಾರಣದ ಸ್ಥಳವಾಗಿದೆ. ಸುತ್ತಲಿನ ಪ್ರದೇಶವು ಗಣಿಗಾರಿಕೆಯ ತಾಣವಾಗಿದೆ.

ಮಧುಗಿರಿ ಕೋಟೆಯನ್ನು ಕಟ್ಟಿಸಿದವರು ಸ್ಥಳೀಯ ಪಾಳೇಗಾರರಾಗಿದ್ದ ರಾಜಾ ಹಿರೇಗೌಡ. 1670ರ ಸುಮಾರಿಗೆ ಈ ಕೋಟೆಯನ್ನು ಮಟ್ಟಿನಿಂದ ನಿರ್ಮಿಸಲಾಗಿತ್ತು. ಅನಂತರ ಹೈದರಾಲಿ, ಟಿಪ್ಪುಸುಲ್ತಾನ್ ಹಾಗೂ ಮೈಸೂರರಸರ ಆಳ್ವಿಕೆಯಲ್ಲಿ ಕೋಟೆ ಪುನರುಜ್ಜೀವನಗೊಂಡಿತು. ಬೆಟ್ಟದ ತಳದಲ್ಲಿ ನಾಲ್ಕು ಗುಹೆಗಳಿವೆ. ಭೀಮನ ದೊಣೆ, ನವಿಲು ದೊಣೆ ಎಂಬ ಎರಡು ಕೆರೆಗಳೂ ಇವೆ. ಮಧುಗಿರಿ ಬೆಟ್ಟದ ತುತ್ತತುದಿಯಲ್ಲಿ ಹಿಂದೆ ಇತ್ತೆಂದು ಹೇಳಲಾಗುವ ಗೋಪಾಲಕೃಷ್ಣ ದೇವಾಲಯ ಈಗ ಪಾಳುಬಿದ್ದಿದೆ.

ಮಾರ್ಗ :

ಬೆಂಗಳೂರಿನಿಂದ 107 ಕಿ.ಮಿ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಿಗುವ ಡಾಬಸ್ ಪೇಟೆಯಿಂದ ಕೊರಟಗೆರೆ ಮಾರ್ಗವಾಗಿ ಮಧುಗಿರಿ ತಲುಪಬಹುದು. ಕೊರಟಗೆರೆ ಮತ್ತು ಪಾವಗಡದ ನಡುವೆ ಇದೆ. ಅಥವಾ ತುಮಕೂರು ನಗರದಿಂದ ರಾಜ್ಯಹೆದ್ದಾರಿ 33 ಮತ್ತು ರಾಜ್ಯಹೆದ್ದಾರಿ 3 ರ ಮೂಲಕ (ಮಧುಗಿರಿ ರಸ್ತೆ , ಕೊರಟಗೆರೆ ಮಾರ್ಗ) ಮಧುಗಿರಿ ತಲುಪಬಹುದು. ಕೊರಟಗೆರೆಯಿಂದ 18 ಕಿ.ಮಿ. ದೂರದಲ್ಲಿದೆ.ರಾ‍‍‌ ಹೆದ್ದಾರಿ 4ರ ಸಿರಾದಿಂದ ಬಡವನಹಳ್ಳಿ ಮಾರ್ಗವಾಗಿ 39 ಕಿ ಮೀ ದೂರದಲ್ಲಿದೆ.