ಕಾಡು ಬೆಳ್ಳುಳ್ಳಿಯ ಔಷಧೀಯ ಗುಣಗಳು

08/09/2020

ಲಿಲಿಯೇಸೀ ಕುಟುಂಬಕ್ಕೆ ಸೇರಿದ ಸಿಲ ಇಂಡಿಕ ಮತ್ತು ಅರ್ಜಿನಿಯ ಇಂಡಿಕ ಎಂಬ ಶಾಸ್ತ್ರನಾಮವುಳ್ಳ ಎರಡು ಪುಟ್ಟಗಿಡಗಳಿಗಿರುವ ಸಾಮಾನ್ಯ ಹೆಸರು. ಇವಕ್ಕೆ ಕಾಡು ಈರುಳ್ಳಿ, ನಾಯಿ ಉಳ್ಳಿ ಮುಂತಾದ ಹೆಸರುಗಳೂ ಇವೆ. ಇಂಗ್ಲಿಷಿನಲ್ಲಿ ಇಂಡಿಯನ್ ಸ್ಕ್ವಿಲ್ ಎಂದು ಕರೆಯಲಾಗುತ್ತದೆ. ಇವೆರಡೂ ಅನೇಕ ಲಕ್ಷಣಗಳಲ್ಲಿ ಸಮಾನವಾಗಿವೆ. ಎರಡೂ ಭಾರತದಾದ್ಯಂತ, ಎಲ್ಲ ಪ್ರದೇಶಗಳಲ್ಲೂ ಬೆಳೆಯುತ್ತವೆ. ಮರಳು ಭೂಮಿಯಲ್ಲಿ ಹೇರಳ.

ಔಷಧೀಯ ಗುಣಗಳು
ಕಾಡು ಬೆಳ್ಳುಳ್ಳಿಯ ಎಳೆಯ ಕಂದಗೆಡ್ಡೆಗಳಿಗೆ ಔಷಧೀಯ ಮಹತ್ತ್ವವಿದೆ. ಇವುಗಳ ರಸಕ್ಕೆ ಕಫ ಕತ್ತರಿಸುವ ಹೃದಯದ ಬಡಿತವನ್ನು ಪ್ರಜೋದಿಸುವ, ಜೀರ್ಣಕಾರಕ ಹಾಗೂ ಮೂತ್ರವರ್ಧಕ ಗುಣಗಳಿವೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಬಳಸಿದಾಗ ಈ ರಸ ತೀಕ್ಷ್ಣ ವಿಷಪೂರಿತವೂ ವಾಂತಿಕಾರಕವೂ ವಿರೇಚಕವೂ ಆಗಬಲ್ಲುದು. ಇದನ್ನು ಸಾಮಾನ್ಯವಾಗಿ ಆಸ್ತಮಾ (ದಮ್ಮು), ಜಲೋದರ, ಸಂಧಿವಾತ, ತೊನ್ನು, ಚರ್ಮರೋಗ ಇತ್ಯಾದಿಗಳಿಗೆ ಔಷಧಿಯಾಗಿ ಬಳಸುವುದುಂಟು. ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ, ನೆಗಡಿ, ಶ್ವಾಸನಾಳದ ಊತ, ಗೂರಲು, ಇತ್ಯಾದಿ ದೀರ್ಘಕಾಲದ ರೋಗಗಳಿಗೂ ಹೃದಯಕ್ಕೆ ಸಂಬಂಧಿಸಿದ ಜಲೋದರ ಮುಂತಾದುವುಗಳಲ್ಲಿ ಮೂತ್ರ ವರ್ಧಕವಾಗಿಯೂ ಇದನ್ನು ಬಳಸುವುದುಂಟು. ಚರ್ಮದ ಮೇಲಿನ ಗಂಟು ಅಥವಾ ನಾರುಲಿಗಳನ್ನು ನಾಶಪಡಿಸಲು ಕಂದಗೆಡ್ಡೆಯ ಪುಡಿಯನ್ನು ಲೇಪಿಸುವುದುಂಟು. ಕಾಲಿನಲ್ಲಿ ಆಣಿ, ಒತ್ತುಗಂಟು ಮುಂತಾದುವುಗಳನ್ನು ನಿವಾರಿಸಲು ಗೆಡ್ಡೆಯನ್ನು ಹುರಿದು ಪುಡಿಮಾಡಿ ಬೆಚ್ಚಾರವಾಗಿ (ಪೋಲ್ಟೀಸು) ಬಳಸುವುದುಂಟು. ಕುದುರೆಗಳ ಮೂತ್ರ ರೋಗಕ್ಕೂ, ಹೊಟ್ಟೆ ನೋವಿಗೂ ಇದು ಉಪಯುಕ್ತ.

OLYMPUS DIGITAL CAMERA