ಮತ್ತೊಬ್ಬರ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲ : ಅಮ್ಮ ಕೊಡವ ಸಮಾಜ ಸ್ಪಷ್ಟನೆ

08/09/2020

ಮಡಿಕೇರಿ ಸೆ.8 : ತಲಕಾವೇರಿ, ಭಾಗಮಂಡಲ ಹಾಗೂ ಪಾಡಿ ಶ್ರೀಇಗ್ಗುತ್ತಪ್ಪ ದೇವಾಲಯಗಳಲ್ಲಿ ಅಮ್ಮ ಕೊಡವರಿಗೆ ಪ್ರಾತಿನಿಧ್ಯ ನೀಡಬೇಕೆಂದು ಹಕ್ಕು ಮಂಡಿಸಲಾಗಿದೆಯೇ ಹೊರತು ಇತರರ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಮಾಡುತ್ತಿಲ್ಲವೆಂದು ಅಖಿಲ ಅಮ್ಮ ಕೊಡವ ಸಮಾಜ ಸ್ಪಷ್ಟಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಉಪಾಧ್ಯಕ್ಷ ಪಾಡಿಯಮ್ಮಂಡ ಮುರುಳಿ ಕರುಂಬಮ್ಮಯ್ಯ ಕೊಡಗಿನ ಕುಲದೇವಿ ಕಾವೇರಮ್ಮನ ಸೇವೆಯಲ್ಲಿ ಮೂಲನಿವಾಸಿಗಳಾದ ಅಮ್ಮ ಕೊಡವರನ್ನು ಭಾಗಿಯಾಗಿಸಬೇಕೆನ್ನುವ ಬಗ್ಗೆ ಈ ಹಿಂದೆ ಅನೇಕ ಬಾರಿ ಹೂ ಪ್ರಶ್ನೆಯನ್ನು ಇಟ್ಟಾಗ ತಿಳಿದು ಬಂದಿದೆ. ಇದಕ್ಕೆ ಪೂರಕವಾಗಿ 1998-99 ರ ಅಷ್ಟಮಂಗಲ ಪ್ರಶ್ನೆಯ ಪುಟ ಸಂಖ್ಯೆ 22 ರಲ್ಲಿ ಉಲ್ಲೇಖಿಸಿರುವಂತೆ ತಲಕಾವೇರಿಯಲ್ಲಿ ಭಂಡಾರ ತೆಗೆಯುವಾಗಲು ಮತ್ತು ಪ್ರಾರ್ಥಿಸುವಾಗಲೂ ಅಮ್ಮ ಕೊಡವರು ಖಡ್ಡಾಯವಾಗಿ ಹಾಜರಿರಬೇಕು ಎಂದು ತಿಳಿಸಲಾಗಿದೆ. ಕೊಡವ-ಅಮ್ಮಕೊಡವರ ಶಾಪ ವಿಮೋಚನೆಗಾಗಿ ಎಂ.ಬಿ.ದೇವಯ್ಯ ಹಾಗೂ ದಿ.ಅಮ್ಮತ್ತೀರ ಕೃಷ್ಣಕುಮಾರ್ ನೇತೃತ್ವದಲ್ಲಿ ಯಜ್ಞ, ಯಾಗ, ಪೂಜಾ ವಿಧಿವಿಧಾನಗಳನ್ನು ಮಾಡಿರುವುದು ಮತ್ತು ಮಾಡುತ್ತಿರುವುದು ಕೊಡಗಿನ ಜನತೆಗೆ ಗೊತ್ತಿರುವ ವಿಷಯವಾಗಿದೆ ಎಂದರು.
ಕೊಡಗಿನ ಅಭ್ಯುದಯಕ್ಕಾಗಿ ಅಮ್ಮಕೊಡವ ಜನಾಂಗಕ್ಕೆ ಕಾವೇರಿ ಕ್ಷೇತ್ರದಲ್ಲಿ ಪೂಜಾಕಾರ್ಯ ಮತ್ತು ತಕ್ಕ ಮುಖ್ಯಸ್ಥರ ಸ್ಥಾನಮಾನ ಸಹಿತ ಖಾಯಂ ಪ್ರಾತಿನಿಧ್ಯ ನೀಡಬೇಕೆಂದು ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ನಮ್ಮ ಹಕ್ಕನ್ನು ನಾವು ಕೇಳಿದ್ದೇವೆ, ತಲಕಾವೇರಿ ಕ್ಷೇತ್ರದಲ್ಲಿ ಅರ್ಚಕ ವೃಂದ ನಡೆಸುತ್ತಿರುವ ಸರದಿ ಪೂಜಾ ಕ್ರಮಕ್ಕೆ ನಮ್ಮ ಆಕ್ಷೇಪವಿಲ್ಲ. ಅಮ್ಮ ಕೊಡವರಿಗೆ ಪ್ರಾತಿನಿಧ್ಯ ನೀಡಬೇಕು ಎನ್ನುವುದು ಮನವಿಯಷ್ಟೇ ಎಂದು ಸ್ಪಷ್ಟಪಡಿಸಿದರು.
ಅಮ್ಮ ಕೊಡವ ಜನಾಂಗ ಬ್ರಾಹ್ಮಣ ಸಮುದಾಯಕ್ಕೆ ಗೌರವ ನೀಡುತ್ತಾ ಬಂದಿದೆ. ಹಿಂದೂ ಧಾರ್ಮಿಕ ವಿಧಿವಿಧಾನಗಳಲ್ಲಿ ಬ್ರಾಹ್ಮಣರ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ತಲಕಾವೇರಿ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಹಾಗೂ ಕುಟುಂಬ ವರ್ಗದ ಸಾವು ಅತೀವ ದು:ಖವನ್ನು ತಂದಿದೆ ಎಂದು ಹೇಳಿದರು.
ಕಾವೇರಿ ಕ್ಷೇತ್ರದಲ್ಲಿ ಆಚಾರ್ ಕುಟುಂಬ 300 ವರ್ಷಗಳಿಂದ ವಂಶಪಾರಂಪಾರ್ಯವಾಗಿ ಪೂಜೆ ಸಲ್ಲಿಸುತ್ತಿರುವುದು ಎಷ್ಟು ಸತ್ಯವೋ ಹಾಗೆ ಅಷ್ಟೇ ವರ್ಷಗಳ ಹಿಂದಿನ ಕಾಲ ಘಟ್ಟದಲ್ಲಿ ಸಸ್ಯಹಾರಿಯಾದ ಅಮ್ಮ ಕೊಡವರು ಪೂಜೆ ಸಲ್ಲಿಸುತ್ತಿದ್ದಿರಬಹುದು ಎಂಬುವುದನ್ನು ಕೂಡ ಒಪ್ಪ ಬೇಕಾಗುತ್ತದೆ. ಕ್ಷತ್ರಿಯರೇ ಇದ್ದಂತಹ ಆ ಕಾಲದಲ್ಲಿ ಕೊಡಗಿನ 21 ಮೂಲ ನಿವಾಸಿಗಳಲ್ಲಿ ಸಸ್ಯ ಹಾರಿಯಾಗಿ ಅಮ್ಮಕೊಡವರು ಮಾತ್ರ ಇದ್ದರು ಎನ್ನುವುದನ್ನು ತರ್ಕಿಸಬೇಕಾಗುತ್ತದೆ ಎಂದು ಮುರುಳಿ ತಿಳಿಸಿದರು.
ಅಮ್ಮ ಕೊಡವ ಜನಾಂಗ ಎಂದಿಗೂ ದ್ವೇಷ ಬಿತ್ತುವ, ಜಾತಿ ವೈಷಮ್ಯ ಮಾಡುವ, ಸಮಾಜದ ಶಾಂತಿ ಕದಡುವ ಕೆಲಸ ಮಾಡುವುದಿಲ್ಲ. ಗೌಡ, ಬ್ರಾಹ್ಮಣರಾದಿಯಾಗಿ ಎಲ್ಲಾ ಮೂಲನಿವಾಸಿಗಳನ್ನು, ಜನಾಂಗದವರನ್ನು ಗೌರವಿಸುವುದಲ್ಲದೆ, ಎಲ್ಲರೊಂದಿಗೆ ಒಗ್ಗಟ್ಟಿನಿಂದ ಬದುಕು ಸಾಗಿಸುತ್ತಿದೆ. ಅಮ್ಮಕೊಡವರು ಅತೀ ಕಡಿಮೆ ಸಂಖ್ಯೆಯಲ್ಲಿರುವುದರಿಂದ ಅನೇಕ ಅವಕಾಶಗಳಿಂದÀ ವಚಿಂತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೀಗ ದೇವಾಲಯಗಳಲ್ಲಿ ಪ್ರಾತಿನಿಧ್ಯಕ್ಕಾಗಿ ಮುಜರಾಯಿ ಇಲಾಖೆಯ ನಿಯಮದಡಿಯಲ್ಲಿ ಬೇಡಿಕೆ ಇಡಲಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲವೆಂದು ಮುರುಳಿ ಸ್ಪಷ್ಟಪಡಿಸಿದರು.
ಸಚಿವರು, ಶಾಸಕರು, ಸಂಸದರು, ಕಾವೇರಿ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಶ್ರೀಪಾಡಿ ಇಗ್ಗುತ್ತಪ್ಪ ದೇವಾಲಯದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿ ಹಕ್ಕನ್ನು ಮಂಡಿಸುವುದಾಗಿ ಹೇಳಿದರು. ಮತ್ತೊಮ್ಮೆ ಹೂ ಪ್ರಶ್ನೆಯ ಮೂಲಕ ಅಮ್ಮ ಕೊಡವರ ಅಗತ್ಯತೆಯ ಬಗ್ಗೆ ತಿಳಿದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ಸಮಾಜದ ಗೌರವ ಅಧ್ಯಕ್ಷ ಬಾನಂಡ ಎನ್.ಪ್ರತ್ಯು ಮಾತನಾಡಿ ನಾವು ಯಾರನ್ನೂ ನೋಯಿಸಿಲ್ಲ, ಇನ್ನು ಮುಂದೆಯೂ ನೋಯಿಸುವುದಿಲ್ಲ. ಆದರೆ ಯಾರೂ ಕೂಡ ಇತಿಹಾಸ ತಿಳಿಯದೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಬಾರದು ಎಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಸಮಾಜದ ಅಧ್ಯಕ್ಷ ಎ.ಆರ್.ವೇಣುಗೋಪಾಲ್, ಕಾರ್ಯದರ್ಶಿ ಪುತ್ತಾಮನೆ ಅನಿಲ್ ಪ್ರಸಾದ್ ಹಾಗೂ ಮಾಜಿ ಉಪಾಧ್ಯಕ್ಷರಾದ ಉಮಾಪ್ರಭು ಉಪಸ್ಥಿತರಿದ್ದರು.