ವಿರಾಜಪೇಟೆ ಪ.ಪಂ ವಿರುದ್ಧ ನಾಗರಿಕ ಸಮಿತಿ ಅಸಮಾಧಾನ

September 8, 2020

ಮಡಿಕೇರಿ ಸೆ.8 : ವಿರಾಜಪೇಟೆ ಪಟ್ಟಣ ಪಂಚಾಯ್ತಿ ನಿಯಮ ಬಾಹಿರ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದು, ಸ್ಥಳೀಯ ಜನರ ಮೂಲಭೂತ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ವಿರಾಜಪೇಟೆ ನಾಗರಿಕ ಸಮಿತಿ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಮುಖ ಹಾಗೂ ವಕೀಲ ಸೋಮಲೋಕನಾಥ್ ಅವರು ಪ.ಪಂ ವ್ಯಾಪ್ತಿಯ ಜನ ಅನುಭವಿಸುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ಈ ಹಿಂದೆ ಮುಖ್ಯಾಧಿಕಾರಿ, ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ನೀಡಲಾಗಿತ್ತು. ಆದರೆ ಯಾವುದೇ ಸಮಸ್ಯೆಗಳಿಗೆ ಪರಿಹಾರ ದೊರೆತ್ತಿಲ್ಲವೆಂದು ಟೀಕಿಸಿದರು.
ಹಸಿಮೀನು-ಮಾಂಸ ಮಾರುಕಟ್ಟೆಯನ್ನು 2020-21ನೇ ಸಾಲಿಗೆ ಹರಾಜು ಮಾಡಿದ ಪ್ರಕ್ರಿಯೆಯಲ್ಲಿ ಮೋಸ ಹಾಗೂ ಸ್ವಜನ ಪಕ್ಷಪಾತ ನಡೆದಿರುವುದು ಬಯಲಿಗೆ ಬಂದಿದೆ. ಈ ಹರಾಜು ಪ್ರಕ್ರಿಯೆ ಪಾರದರ್ಶಕತೆಯನ್ನು ಹೊಂದಿಲ್ಲವೆಂದು ಆರೋಪಿಸಿದರು.
ಹರಾಜು ಪ್ರಕ್ರಿಯೆ ಕುರಿತು ಸೂಕ್ತ ತನಿಖೆ ನಡೆಸಿ ನಿಯಮ ಉಲ್ಲಂಘನೆಗೆ ಕಾರಣಕರ್ತರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮಳೆಯಿಂದ ಹಾನಿಗೊಳಗಾದ ಸರ್ಕಾರಿ ಕಟ್ಟಡಗಳು, ರಸ್ತೆ ಮತ್ತು ಚರಂಡಿ ಕಾಮಗಾರಿಯ ಕ್ರಿಯಾ ಯೋಜನೆಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಸುಮಾರು 10 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ. ಆದರೆ ಬಹಳಷ್ಟು ಕಾಮಗಾರಿಗಳನ್ನು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಹೊರಗಿನ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸದೆ ಹೊರಗಿರುವ ಪ್ರದೇಶಗಳ ಅಭಿವೃದ್ಧಿಗೆ ಹಣ ಮೀಸಲಿರಿಸಲಾಗಿದೆ ಎಂದು ಸೋಮಲೋಕನಾಥ್ ಆರೋಪಿಸಿದರು.
ಪ.ಪಂ ವ್ಯಾಪ್ತಿಯನ್ನು ಹೊರತುಪಡಿಸಿ ಬೇರೆ ಕಡೆಯ ಕಾಮಗಾರಿಯನ್ನು ನಡೆಸಲು ಪಂಚಾಯ್ತಿಗೆ ಅಧಿಕಾರವಿಲ್ಲ. ಗ್ರಾಮೀಣ ಭಾಗದಲ್ಲಿ ಗ್ರಾ.ಪಂ ಗಳೇ ಅಭಿವೃದ್ಧಿ ಕಾರ್ಯವನ್ನು ಮಾಡುತ್ತವೆ. ಆದ್ದರಿಂದ ನಿಯಮ ಮೀರಿದ ಕಾಮಗಾರಿಯ ಹಣವನ್ನು ತಡೆ ಹಿಡಿಯಬೇಕು. ಪಂಚಾಯ್ತಿಗೆ ಉಂಟಾಗಿರುವ ಆರ್ಥಿಕ ನಷ್ಟವನ್ನು ಸಂಬಂಧಪಟ್ಟ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸಮಿತಿಯ ಸಂಚಾಲಕ ಡಾ.ಇ.ರಾ.ದುರ್ಗಾಪ್ರಸಾದ್ ಮಾತನಾಡಿ ಪಟ್ಟಣದಲ್ಲಿ ಬುಧವಾರ ಸಂತೆಯ ದಿನ ಬೀದಿ ಬದಿ ವ್ಯಾಪಾರಿಗಳಿಂದ “ಸುಂಕ” ಎಂಬ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ. ಒತ್ತಡ ಹಾಕಿ ತಲಾ ರೂ.40 ರಿಂದ 50 ವಸೂಲಿ ಮಾಡಲಾಗುತ್ತಿದೆ. ವಸೂಲಿ ಮಾಡಿದ ಈ ಮೊತ್ತಕ್ಕೆ ರಶೀತಿಯನ್ನು ಕೂಡ ನೀಡುತ್ತಿಲ್ಲವೆಂದು ಆರೋಪಿಸಿದರು.
ಇದು ಅಪರಾಧವಾಗಿರುವುದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಬೀದಿ ಬದಿ ವ್ಯಾಪಾರಿಗಳಿಂದ ವಸೂಲಿ ಮಾಡಬೇಕಾದ ಸುಂಕ ಎಷ್ಟು ಎಂಬುವುದನ್ನು ಪಂಚಾಯ್ತಿ ಅಧಿಕೃತವಾಗಿ ಪ್ರಕಟಿಸಬೇಕು ಮತ್ತು ವಸೂಲಿ ಮಾಡಿದ ಮೊತ್ತಕ್ಕೆ ರಶೀತಿ ನೀಡಬೇಕೆಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರೆಹಮಾನ್, ಪ್ರಮುಖರಾದ ಅನಿತಾ ಥೆರೇಸಾ ಹಾಗೂ ನೆಲ್ಲಮಕ್ಕಡ ಗಣಪತಿ ಉಪಸ್ಥಿತರಿದ್ದರು.