ಸೋಮವಾರಪೇಟೆಯಲ್ಲಿ ಧಾರಾಕಾರ ಮಳೆ : ತಡೆಗೋಡೆ ಕುಸಿತ, ಮನೆಗೊಳಗೆ ನುಗ್ಗಿದ ನೀರು

08/09/2020

ಮಡಿಕೇರಿ ಸೆ. 8 : ಸೋಮವಾರಪೇಟೆ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆಗೆ ಧಾರಾಕಾರ ಮಳೆ ಸುರಿಯಿತು.
ಪಟ್ಟಣದ ರೇಂಜರ್ಸ್ ಬ್ಲಾಕ್‍ನಲ್ಲಿ ತಡೆಗೋಡೆ ಕುಸಿದ ಪರಿಣಾಮ ಶಶಿಕುಮಾರ್ ಎಂಬವರ ಮನೆಯೊಳಗೆ ನೀರು ನುಗ್ಗಿ, ಮನೆಯವರು ನೀರು ಹೊರಚೆಲ್ಲಲು ಹರಸಾಹಸ ಪಡುವಂತಾಯಿತು. ಪಟ್ಟಣ ವತಿಯಿಂದ ಜನತಾಕಾಲನಿಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಧಾರಾಕಾರ ಮಳೆ ಕಾಮಗಾರಿ ಕೊಚ್ಚಿಹೋಗಿದೆ.
ಗ್ರಾಮೀಣ ಭಾಗದಲ್ಲಿ ಸುರಿದ ಮಳೆಯಿಂದ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದ ಎರಡು ವಾರಗಳಿಂದ ಮಳೆಯಿಲ್ಲದೆ. ಭತ್ತ ನಾಟಿ ಮಾಡಿದ ಗದ್ದೆಯಲ್ಲಿ ನೀರು ಒಣಗಿ, ಸಮಸ್ಯೆಯಾಗಿತ್ತು. ಕಾಫಿ ತೋಟಗಳಲ್ಲಿ ರಾಸಾಯನಿಕ ಗೊಬ್ಬರ ಹಾಕಿದವರು ಮಳೆಗಾಗಿ ಕಾಯುತ್ತಿದ್ದರು. ಶುಂಠಿ, ಜೋಳ, ಸುವರ್ಣಗೆಡ್ಡೆ, ಗೆಣಸು ಬೆಳೆದವರಿಗೂ ಸುರಿದ ಮಳೆ ತೃಪ್ತಿ ತಂದಿದೆ.