3 ವರ್ಷಗಳಿಂದ ಕೊಡಗಿನಲ್ಲಿ 2,90,634 ಹೆಕ್ಟೇರ್ ಬೆಳೆ ಹಾನಿಯಾಗಿದೆ

08/09/2020

ಮಡಿಕೇರಿ ಸೆ.8 : ಜಿಲ್ಲೆಯಲ್ಲಿ ಪ್ರವಾಹ, ಭೂಕುಸಿತ ಸೇರಿದಂತೆ ಪ್ರಕೃತಿ ವಿಕೋಪದಿಂದ ಉಂಟಾದ ಹಾನಿಯ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೇಂದ್ರ ತಂಡದ ಸದಸ್ಯರಿಗೆ ಸವಿಸ್ತಾರವಾಗಿ ವಿವರಿಸಿದರು.
ಆಗಸ್ಟ್ ಮೊದಲ ವಾರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಉಂಟಾದ ಹಾನಿಯ ಸಂಬಂಧ ಕೇಂದ್ರ ತಂಡಕ್ಕೆ ಸೋಮವಾರ ಕೂಡಿಗೆಯ ಸೈನಿಕ ಶಾಲೆ ಸಭಾಂಗಣದಲ್ಲಿ ಪಿಪಿಟಿ ಮೂಲಕ ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 2018 ರಿಂದ ಈವರೆಗೆ ಮಳೆ ಹಾನಿ ಸಂಬಂಧ ರಸ್ತೆ, ಸೇತುವೆಗಳು, ಮನೆಗಳ ಹಾನಿ, ಬೆಳೆ ಹಾನಿ, ಜಾನುವಾರುಗಳ ಸಾವು ಸೇರಿದಂತೆ ಮಾನವ ಪ್ರಾಣ ಹಾನಿಯು ಸಂಭವಿಸಿದೆ. ಅಲ್ಲದೆ ಭೂಕುಸಿತದ ಪ್ರಕರಣಗಳು ಹೆಚ್ಚು ಕಂಡು ಬರುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಕಳೆದ 3 ವರ್ಷಗಳಿಂದ 2,90,634 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ. ಅಲ್ಲದೆ 2018 ರ ಮಳೆ ಹಾನಿಯಿಂದ ಮನೆ ಕಳೆದುಕೊಂಡ 400 ಮಂದಿ ನಿರಾಶ್ರಿತರಿಗೆ ಈಗಾಗಲೇ ಮನೆ ನೀಡಲಾಗಿದೆ. 2018 ರಲ್ಲಿ 19 ಮಾನವ ಜೀವ ಹಾನಿ, 2019 ರಲ್ಲಿ 17 ಮತ್ತು 2020 ರಲ್ಲಿ 3 ಜೀವ ಹಾನಿ ಪ್ರಕರಣಗಳು ವರದಿಯಾಗಿದೆ ಎಂದು ಕೇಂದ್ರ ತಂಡಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದರು.
ಕಾಣೆಯಾದವರ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು 2018 ರಲ್ಲಿ 1, 2019 ರಲ್ಲಿ 4 ಮತ್ತು 2020 ರಲ್ಲಿ 2 ಮಂದಿ ಕಾಣೆಯಾಗಿರುವ ವರದಿಯಾಗಿದೆ. ಜಾನುವಾರುಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ 2018 ರಲ್ಲಿ 268, 2019 ರಲ್ಲಿ 46 ಮತ್ತು 2020 ರಲ್ಲಿ 17 ಜಾನುವಾರುಗಳು ಸಾವನ್ನಪ್ಪಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಈ ಸಂದರ್ಭ ಮಾತನಾಡಿದ ಕೇಂದ್ರ ತಂಡದ ಮುಖ್ಯಸ್ಥರಾದ ಭಾರತ ಸರ್ಕಾರದ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ಅವರು ಜಿಲ್ಲೆಯಲ್ಲಿ ಉಂಟಾದ ಮಳೆ ಪ್ರಮಾಣದ ಅಂಕಿ ಅಂಶಗಳ ವಿವರವನ್ನು ಜಿಲ್ಲಾಧಿಕಾರಿಗಳಿಂದ ಪಡೆದರು.
ಭಾರತ ಸರ್ಕಾರದ ಕೆಎಸ್‍ಡಿಎಂಎ. ಆಯುಕ್ತರಾದ ಮನೋಜ್ ರಾಜನ್ ಅವರು ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಳೆಯ ಪ್ರಮಾಣದ ಬಗ್ಗೆ ತಂಡದ ಮುಖ್ಯಸ್ಥರು ಮತ್ತು ಸಹ ಸದಸ್ಯರಿಗೆ ಮಾಹಿತಿ ನೀಡಿದರು.
ಅಲ್ಲದೆ ಹಿಂದೆ ಉಂಟಾದ ಪ್ರಕೃತಿ ಹಾನಿ ಸಂಬಂಧ ಸಂತ್ರಸ್ತರಿಗೆ ನೀಡಿರುವ ಪರಿಹಾರದ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದರು. ಅಲ್ಲದೆ ಬೆಳೆ ಹಾನಿ ಸಂಬಂಧ ನಡೆಸುತ್ತಿರುವ ಸರ್ವೇ ಕಾರ್ಯದ ಬಗ್ಗೆಯೂ ಕೇಂದ್ರ ತಂಡದ ಅಧಿಕಾರಿಗಳ ಗಮನಸೆಳೆದರು.
ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ, ಡಿಸಿಎಫ್ ಪ್ರಭಾಕರನ್, ಜಿ.ಪಂ.ಉಪ ಕಾರ್ಯದರ್ಶಿ ಗುಡೂರು ಭೀಮಸೇನಾ, ತಾ.ಪಂ.ಇಒ ಲಕ್ಷ್ಮಿ, ತಹಶೀಲ್ದಾರ್ ಮಹೇಶ್, ಡಿವೈಎಸ್‍ಪಿ ದಿನೇಶ್ ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಇತರರು ಇದ್ದರು.