ಪಕ್ಷದಲ್ಲಿ ಮತ್ತೆ ಸಕ್ರಿಯರಾಗಿ : ಸಂಕೇತ್ ಪೂವಯ್ಯ ಮನವೊಲಿಸಿದ ಜೆಡಿಎಸ್

ಮಡಿಕೇರಿ ಸೆ.8 : ಜಿಲ್ಲಾ ಜಾತ್ಯತೀತ ಜನತಾದಳದ ಮಾಜಿ ಅಧ್ಯಕ್ಷ ಸಂಕೇತ್ ಪೂವಯ್ಯ ಅವರು ಮತ್ತೆ ಪಕ್ಷದಲ್ಲಿ ಸಕ್ರಿಯರಾಗಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಹಾಗೂ ಕಾರ್ಯಕರ್ತರು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಇಂದು ಸಂಕೇತ್ ಅವರ ಮನೆಗೆ ಭೇಟಿ ನೀಡಿದ ಗಣೇಶ್ ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ರಾಜಕೀಯ ಸಮಾಲೋಚನೆ ನಡೆಸಿದರು. ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಎಂದು ತಟಸ್ಥ ಮನೋಭಾವ ತಾಳಬಾರದು, ಮತ್ತೆ ಜೆಡಿಎಸ್ ನಲ್ಲಿ ಗುರುತಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಕ್ಷಕ್ಕೆ ಬಲ ತುಂಬಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಂ.ಗಣೇಶ್, ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸಂಕೇತ್ ಪೂವಯ್ಯ ಅವರು ಜನಪರ ಕಾಳಜಿಯಿಂದ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅವರು ರಾಜಕೀಯ ನಿವೃತ್ತಿ ಹೊಂದಿದರೆ ಪಕ್ಷಕ್ಕೆ ಮಾತ್ರವಲ್ಲದೆ ಜನಸಾಮಾನ್ಯರಿಗೂ ನಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜಾತ್ಯತೀತ ನಿಲುವಿನ ಸಂಕೇತ್ ಪೂವಯ್ಯ ಅವರಿಗೆ ಜೆಡಿಎಸ್ ನಲ್ಲಿ ಶಕ್ತಿಯುತ ವೇದಿಕೆ ನೀಡಲು ಚಿಂತನೆ ನಡೆಸಲಾಗಿದೆ. ಅವರ ಸಹಕಾರ ಮತ್ತು ಸಲಹೆ ಜೆಡಿಎಸ್ ಪಕ್ಷಕ್ಕೆ ಅಗತ್ಯವಿದೆ ಎಂದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರ ನಿಷ್ಠೆ, ಸಾಧನೆ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಡಗಿಗೆ ನೀಡಿದ ಸಹಕಾರವನ್ನು ಕಂಡು ರಾಜಕೀಯಕ್ಕೆ ಬರುವ ಅಭಿಲಾಷೆ ವ್ಯಕ್ತಪಡಿಸಿರುವ ಸಂಕೇತ್ ಪೂವಯ್ಯ ಅವರು ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆಯನ್ನು ನೀಡಿದ್ದು, ಅವರ ತೀರ್ಮಾನವನ್ನು ಜೆಡಿಎಸ್ ಸ್ವಾಗತಿಸುತ್ತದೆ ಎಂದರು.
ಕೊಡಗಿನ ಮೂಲೆ ಮೂಲೆಗಳಲ್ಲಿ ಸಂಕೇತ್ ಪೂವಯ್ಯ ಅವರ ಅಭಿಮಾನಿಗಳಿದ್ದು, ಅವರು ಸಕ್ರಿಯವಾಗಿ ತೊಡಗಿಸಿಕೊಂಡರೆ ಪಕ್ಷಕ್ಕೆ ಬಲ ಬರಲಿದೆ ಮತ್ತು ಮುಂದಿನ ಚುನಾವಣೆಗಳಲ್ಲಿ ಗೆಲುವು ಸುಲಭವಾಗಲಿದೆ ಎಂದು ಗಣೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಸಂಕೇತ್ ಪೂವಯ್ಯ ಅವರು ಮಾತನಾಡಿ ಜೆಡಿಎಸ್ ಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಎನ್.ಸಿ.ಸುನೀಲ್, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್ ಖಾನ್, ಯುವ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಜಾಶಿರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬೊಳ್ಳಿಯಂಡ ಗಣೇಶ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಮಂಜುನಾಥ್, ಜಿಲ್ಲಾ ಎಸ್.ಸಿ ಘಟಕ ಅಧ್ಯಕ್ಷರಾದ ಜಯಮ್ಮ ಮತ್ತಿತರರು ಈ ಸಂದರ್ಭ ಹಾಜರಿದ್ದರು.