10 ದಿನ ಹಾರಂಗಿ ಅಣೆಕಟ್ಟೆಯಿಂದ ರೈತರಿಗೆ ನೀರಿಲ್ಲ

08/09/2020

ಮಡಿಕೇರಿ ಸೆ.8 : ಹಾರಂಗಿ ಜಲಾಶಯದಿಂದ ಖಾರಿಫ್ ಬೆಳೆಗಳಿಗೆ ನಾಲೆಗಳ ಮೂಲಕ ಹರಿಸಲಾಗುತ್ತಿರುವ ನೀರನ್ನು ಸೆ.9ರಿಂದ 10 ದಿನಗಳ ಕಾಲ ಸ್ಥಗಿತಗೊಳಿಸಲು ಉನ್ನತ ಮಟ್ಟದ ಸಮಿತಿ ತೀರ್ಮಾನಿಸಿದೆ.
ಜಲಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮದ ವತಿಯಿಂದ ಖಾರಿಫ್ ಬೆಳೆಗಳಿಗೆ ನೀರು ಹರಿಸುವ ಸಂಬಂಧ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಅಚ್ಚುಕಟ್ಟು ಪ್ರದೇಶದ ಶಾಸಕರು ಮತ್ತು ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಸೆ.9ರಿಂದ 18ರವರೆಗೆ ಮುಖ್ಯ ನಾಲೆಯಲ್ಲಿ ಹರಿಯುವ ನೀರನ್ನು ಸ್ಥಗಿತಗೊಳಿಸಲಾಗುವುದು ಎಂದು ಹಾರಂಗಿ ಸಹಾಯಕ ಕಾರ್ಯಪಾಲಕ ಅಭಿಯಂತೆ ಮಹೇಂದ್ರಕುಮಾರ್ ತಿಳಿಸಿದ್ದಾರೆ
ಮೊದಲ ಹಂತದಲ್ಲಿ ಸೆ.9ರಿಂದ 10 ದಿನಗಳ ಕಾಲ ನೀರು ಸ್ಥಗಿತಗೊಳಿಸಲಾಗುವುದು. ಬಳಿಕ ಸೆ.19ರಿಂದ ಅಕ್ಟೋಬರ್ 8ರ ವರೆಗೆ ನೀರು ಹರಿಸಿ ಅ.9ರಿಂದ 18ರವರೆಗೆ ಮತ್ತೆ ನೀರು ಸ್ಥಗಿತಗೊಳಿಸಲಾಗುವುದು. ನಂತರ 20 ದಿನಗಳ ಅಂತರದಲ್ಲಿ ಮತ್ತೆ ನಾಲೆಗೆ ನೀರು ಹರಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಹಾರಂಗಿ ಅಚ್ಚುಕಟ್ಟು ಪ್ರದೇಶವಾಗಿರುವ ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಯ 1,34,895 ಎಕರೆ ಪ್ರದೇಶದ ಖಾರಿಫ್ ಬೆಳೆಗೆ ನೀರನ್ನು ಹರಿಸಲಾಗುತ್ತಿದೆ. ಅದರಂತೆ ಹಾರಂಗಿ ಅಣೆಕಟ್ಟೆಯ ಒಳಹರಿವಿನ ಪ್ರಮಾಣದ ಅಧಾರದಲ್ಲಿ ನೀರನ್ನು ಹತ್ತು ದಿನ ಸ್ಥಗಿತಗೊಳಿಸಿ 20 ದಿನಗಳಲ್ಲಿ ಮತ್ತೆ ನಾಲೆಗೆ ಹರಿಸಲಾಗುವುದು ಎಂದು ಅವರು ಹೇಳಿದ್ದಾರೆ.