ಹಿರಿಯ ಮುಖಂಡ ಎಂ.ಡಬ್ಲ್ಯು.ಅಯ್ಯಪ್ಪರಿಗೆ ಸಂತಾಪ ಸೂಚಿಸಿದ ಬಿಜೆಪಿ

08/09/2020

ಮಡಿಕೇರಿ ಸೆ.8 : ಹಿರಿಯ ಬಿಜೆಪಿ ಮುಖಂಡ ಎಂ.ಡಬ್ಲ್ಯು.ಅಯ್ಯಪ್ಪರಿಗೆ ಬಿಜೆಪಿಯ ಚೆಟ್ಟಳ್ಳಿ, ವಾಲ್ನೂರು ತ್ಯಾಗತ್ತೂರು ಹಾಗೂ ನೆಲ್ಯಹುದಿಕೇರಿ ಘಟಕಗಳು ಸಂತಾಪ ಸೂಚಿಸಿದವು.

ಕೊಡಗಿನ ಕೊಡುಗೈ ದಾನಿ, ಬಿಜೆಪಿಯ ಹಿರಿಯ ಮುಖಂಡ ಗೋಣಿಕೊಪ್ಪ ಸಮೀಪದ ದೇವರಪುರ ನಿವಾಸಿ ಮನೆಯಪಂಡ ಡಬ್ಲ್ಯು. ಅಯ್ಯಪ್ಪ (99) ಸೋಮವಾರ ತಡ ರಾತ್ರಿ ನಿಧನ ಹೊಂದಿದ್ದಾರೆ.

ಜನಸಂಘದ ಕಾಲದಿಂದಲೂ ಬಿಜೆಪಿಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಅವರು ಪಕ್ಷದ ಜಿಲ್ಲಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಜನಸಂಘ, ರಾಷ್ಟ್ರೀಯ ಸಂಯಸೇವಕ ಸಂಘಗಳು ಕೊಡಗಿನಲ್ಲಿ ಕಾಲೂರಲು ಹೆಣಗುತ್ತಿದ್ದ ಕಾಲಘಟದಲ್ಲಿ ಜನಸಂಘವನ್ನು ಸ್ಥಾಪಿಸಿ ಬೇರೂರಿ ನಿಲ್ಲುವಂತೆ ಮಾಡಿದವರಲ್ಲಿ ಅಯ್ಯಪ್ಪ ಅವರೂ ಒಬ್ಬರಾಗಿದ್ದರು. ರಾಜಕೀಯವಾಗಿ ಅವರು ಬಿಜೆಪಿಯಲ್ಲಿದ್ದರೂ ಎಲ್ಲಾ ರಾಜಕೀಯ ಪಕ್ಷದವರು ಇಷ್ಟ ಪಡುವ ಅಜಾತ ಶತ್ರುವಾಗಿದ್ದರು.

ಕೊಡಗಿನ ಉದ್ದಗಲಕ್ಕೂ ವಿವಿಧ ಸಂಘ, ಸಂಸ್ಥೆಗಳ ಉದ್ಧಾರಕ್ಕಾಗಿ ಶ್ರಮಿಸಿದ ಅಯ್ಯಪ್ಪ ಅವರು ಕೊಡುಗೈದಾನಿ ಎಂದೇ ಹೆಸರು ಪಡೆದಿದ್ದರು. ಗೋಣಿಕೊಪ್ಪಲಿನ ದೇವರಪುರದ ನಿವಾಸಿ ಅಯ್ಯಪ್ಪ ಅವರ ಮನೆ ಬಾಗಿಲಿಗೆ ಹೋದ ಯಾವುದೇ ವ್ಯಕ್ತಿ ಹಾಗೂ ಸಂಘಸಂಸ್ಥೆಗಳು ಬರಿಗೈಯಲ್ಲಿ ಹಿಂತಿರುಗುತ್ತಿರಲಿಲ್ಲ. ಅವರು ಬಲಗೈಯಲ್ಲಿ ಕೊಡ ಮಾಡುವ ಸಹಾಯ ಅವರ ಎಡಗೈಗೂ ತಿಳಿಯುತ್ತಿರಲಿಲ್ಲ.

ತನ್ನ 16ನೇ ವರ್ಷಕ್ಕೆ ಸಾಮಾಜಿಕ ಬದುಕಿಗೆ ಪದಾರ್ಪಣೆ ಮಾಡಿದ್ದ ಅಯ್ಯಪ್ಪ ತಮ್ಮ ಸುದೀರ್ಘ ಬದುಕನ್ನು ಸಮಾಜದ ನಡುವೆ, ಸಮಾಜದ ಕಷ್ಟ ಸುಖಗಳಿಗೆ ಸ್ವಂದಿಸುತ್ತಾ ಹಲವು ಸಂಘ ಸಂಸ್ಥೆಗಳಲ್ಲಿ ದುಡಿದು ಸಾರ್ಥಕಪಡಿಸಿಕೊಂಡಿದ್ದಾರೆ. ಜೀವನದುದ್ದಕ್ಕೂ ಜಾತಿ, ಮತ, ಪಂಗಡ ಎನ್ನದೆ ಸಹಾಯ ಹಸ್ತ ಚಾಚುತ್ತಾ ಬಂದಿದ್ದರೂ ಯಾವತ್ತು ಪ್ರಚಾರ ಬಯಸಿದವರಲ್ಲ.ಮಾಧ್ಯಮದವರು ಸಂದರ್ಶಿಸಲು ತೆರಳಿದರೆ ನಗುನಗುತ್ತಾ ನಿರಾಕರಿಸಿ ಅವರ ಅನುಭವನ್ನು ಮಾತ್ರ ಹಂಚಿಕೊಂಡು ಪ್ರೀತಿಯಿಂದ ಕಾಫಿ ಮಾಡಿಕೊಟ್ಟು ಕಳುಹಿಸುವ ವ್ಯಕ್ತಿತ್ವ ಅವರದ್ದಾಗಿತ್ತು.

ಹುಟ್ಟುತ್ತಲೇ ಸ್ಥಿತಿವಂತರಾಗಿದ್ದರೂ ಅವರ ಬದುಕು ಸರಳ ಹಾಗೂ ಇತರರಿಗೆ ಮಾದರಿ ಎನ್ನುವಂತಿತ್ತು.

ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ಈಡಾಗಿ ಹಾಸಿಗೆ ಹಿಡಿದಿದ್ದರೂ ತಮ್ಮ ಮಗನ ಮೂಲಕ ಹಲವರಿಗೆ ನೆರವಾದವರು.

ಕೇವಲ ಪ್ರಚಾರಕ್ಕಾಗಿ ದಾನ ಮಾಡುವ, ಮಾರನೇ ದಿನವೇ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಹಲವರ ನಡುವೆ ಇಂತಹ ಎಲೆಮರೆಯ ಕಾಯಿಯಂತೆ ಬದುಕಿ, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿ. ಅದರಲ್ಲೇ ಸಂತೋಷವನ್ನು ಕಾಣುತ್ತಿದ್ದ ಅಯ್ಯಪ್ಪ ಅವರ ಅಗಲಿಕೆ ಕೊಡಗಿಗೆ ತುಂಬಲಾರದ ನಷ್ಟ ಎಂದರೆ ತಪ್ಪಾಗಲಾರದು