ಅಧಿವೇಶನಕ್ಕೆ ಬರುವವರಿಗೆ ಕೋವಿಡ್ ಟೆಸ್ಟ್

September 9, 2020

ಬೆಂಗಳೂರು ಸೆ.9 : ಇದೇ ತಿಂಗಳ 21 ರಿಂದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು, ಸಚಿವರು, ಶಾಸಕರು, ಅಧಿಕಾರಿಗಳು, ಮಾಧ್ಯಮದವರೂ ಸೇರಿದಂತೆ ಅಧಿವೇಶನಕ್ಕೆ ಬರುವ ಪ್ರತಿಯೊಬ್ಬರು ಕೋವಿಡ್ ಟೆಸ್ಟ್ ಮಾಡಿಸಲು ನಿರ್ಧರಿಸಲಾಗಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನ ಆರಂಭಕ್ಕೆ ಮೂರು ದಿನದ ಮೊದಲೇ ಪ್ರತಿಯೊಬ್ಬರು ಕೋವಿಡ್ ಟೆಸ್ಟ್ ಮಾಡಿಸಿ ದಾಖಲೆ ತರುವುದು ಕಡ್ಡಾಯಗೊಳಿಸಲಾಗಿದೆ.
ಸೆ.21 ರಿಂದ 30 ರವರೆಗೆ ಕಲಾಪ ನಡೆಯಲಿದೆ.ವಿಧಾನಸಭೆಯ ಕಲಾಪದಲ್ಲಿ ಪಾಲ್ಗೊಳ್ಳುವವರಿಗೆ ಕೋವಿಡ್ ಟೆಸ್ಟ್ ಅನ್ವಯವಾಗುತ್ತದೆ. ಜಿಲ್ಲಾ,ತಾಲೂಕು ಕೇಂದ್ರದಲ್ಲಿ ತಪಾಸಣೆ ನಡೆಯಲಿದೆ.ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸುವಂತೆ ಸೂಚಿಸಿದ್ದೇವೆ ಎಂದು ಅವರು ತಿಳಿಸಿದರು.
ಶಾಸಕರು ಅವರವರ ಕ್ಷೇತ್ರದಲ್ಲೇ ಕೋವಿಡ್ ಟೆಸ್ಟ್ ಮಾಡಿಸಬಹುದು, ಬೇರೆಯವರಿಗೆ ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಇನ್ನು ಸಿಬ್ಬಂದಿಗಳಿಗೆ ಸೆ.18 ರಂದು ಕೊರೊನಾ ಪರೀಕ್ಷೆಯನ್ನು ವಿಧಾನಸೌಧದಲ್ಲಿಯೇ ಮಾಡಿಸಲು ವ್ಯವಸ್ಥೆ ಮಾಡಲಾಗಿದೆ.