ಶಿವನ ಅತ್ಯಂತ ಐದು ಪವಿತ್ರ ದೇವಾಲಯಗಳಲ್ಲಿ ಒಂದಾಗಿರುವ ಚಿದಂಬರಂ ದೇವಾಲಯ

09/09/2020

ಚಿದಂಬರಂ ದೇವಾಲಯ ವು (ತಮಿಳು:சிதம்பரம் கோயில்) ಭಗವಂತನಾದ ಶಿವನಿಗೆ ಸಮರ್ಪಿತವಾದ ಒಂದು ಪ್ರಸಿದ್ಧ ಹಿಂದೂ ದೇವಾಲಯ. ಇದು ಚಿದಂಬರಂ ಎಂಬ ನಗರದ ಹೃದಯ ಭಾಗದಲ್ಲಿದೆ. ಈ ನಗರವು ದಕ್ಷಿಣ ಭಾರತದ ತಮಿಳುನಾಡು ರಾಜ್ಯದ ಪೂರ್ವ ಮಧ್ಯಭಾಗದಲ್ಲಿರುವ ಕಡಲೂರು, ಎಂಬ ಜಿಲ್ಲೆಗೆ ಸೇರಿದೆ. ಇದು ಕರೈಕಲ್‌ನ 60 ಕಿಮೀ ದೂರದ ಉತ್ತರಕ್ಕೂ ಮತ್ತು ಪಾಂಡಿಚೇರಿಯ 78ಕಿಮೀ ನ ದಕ್ಷಿಣಕ್ಕೂ ಇದೆ.

ಗೋಪುರದ ಮೇಲಿರುವ ಗೋಜಲಾದ ಕೆತ್ತನೆಗಳು. ಸಂಗಮ ಸಾಹಿತ್ಯದ ಪ್ರಕಾರ ವಿದುವೆಲ್ವಿದುಗು ಪೆರುಮ್ಟಾಕ್ಕನ್ ಎಂಬ ವಿಶ್ವಕರ್ಮರ ಪರಂಪರೆಯ ಗುಂಪು ಈ ದೇವಾಲಯದ ಜೀರ್ಣೋದ್ಧಾರದ ಪ್ರಧಾನ ಶಿಲ್ಪಿಯಾಗಿದೆ. ಇದರ ಚರಿತ್ರೆಯಲ್ಲಿ ಹಲವಾರು ಹೊಸ ಬದಲಾವಣೆಗಳು ನಡೆದಿದ್ದು, ಇದು ವಿಶೇಷವಾಗಿ ಪಲ್ಲವ/ಚೋಳ ಅರಸರ ಕಾಲದಲ್ಲಿ ಮತ್ತು ಪೂರ್ವ-ಮಧ್ಯಕಾಲೀನ ಅವಧಿಗಳಲ್ಲಿ ಹೆಚ್ಚಾಗಿ ನಡೆದಿವೆ.

ಹಿಂದೂ ಸಾಹಿತ್ಯದಲ್ಲಿ, ಚಿದಂಬರಂ ಶಿವನ ಅತ್ಯಂತ ಐದು ಪವಿತ್ರ ದೇವಾಲಯಗಳಲ್ಲಿ ಒಂದಾಗಿದ್ದು, ಪ್ರತಿಯೊಂದು ದೇವಾಲಯವೂ ಪಂಚ ಭೂತಗಳಲ್ಲಿ ಒಂದನ್ನು ಸೂಚಿಸುತ್ತದೆ. ಇವುಗಳಲ್ಲಿ ಚಿದಂಬರಂ ದೇವಾಲಯವು ಆಕಾಶ (ಮೋಡರಹಿತ ಶುದ್ಧ ಆಕಾಶ)ವನ್ನು ಸೂಚಿಸುತ್ತದೆ. ಈ ವರ್ಗದ ಇತರೆ ನಾಲ್ಕು ದೇವಾಲಯಗಳೆಂದರೆ: ತಿರುವನಯ್‌ಕಾವಲ್ ಜಂಬುಕೇಶ್ವರ (ವರುಣ), ಕಂಚಿ ಏಕಾಂಬರೇಶ್ವರ (ಭೂಮಿ), ತಿರುವಣ್ಣಾಮಲೈ ಅರುಣಾಚಲೇಶ್ವರ (ಅಗ್ನಿ) ಮತ್ತು ಕಲಾಹಸ್ತಿ ನಾದರ್ (ವಾಯು).