ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ಮಡಿಕೇರಿ ಸೆ. 9 : ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಮೆಟ್ರಿಕ್ ನಂತರದ ಕೋರ್ಸ್‍ಗಳಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಇಲಾಖಾ ವತಿಯಿಂದ ನೀಡಲಾಗುವ ಪ್ರೋತ್ಸಾಹಧನ ಮಂಜೂರಾತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 30 ಕೊನೆಯ ದಿನವಾಗಿದೆ. ವಿದ್ಯಾರ್ಥಿಗಳು ದ್ವಿತೀಯ/ ಅಂತಿಮ ವರ್ಷದ ಪಿಯುಸಿಯನ್ನು ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರಬೇಕು. ಸಿಬಿಎಸ್‍ಸಿ ಮತ್ತು ಐಸಿಎಸ್‍ಇ ವತಿಯಿಂದ ನಡೆಸಲಾಗುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಸಹ ಈ ಯೋಜನೆಯಡಿಯಲ್ಲಿ ಪ್ರೋತ್ಸಾಹ ಧನ ಪಡೆಯಲು ಅರ್ಹರಿರುತ್ತಾರೆ.
ಪದವಿ, ಸ್ನಾತಕೋತ್ತರ ಪದವಿ, ಕೃಷಿ, ಪಶುಸಂಗೋಪನೆ, ಇಂಜಿನಿಯರಿಂಗ್, ಮೆಡಿಕಲ್ ಕೋರ್ಸುಗಳಿಗೆ ಸಂಬಂಧಿಸಿದಂತೆ ಪ್ರತಿ ವರ್ಷ ಪ್ರಥಮ ಪ್ರಯತ್ನದಲ್ಲಿ ಪಾಸಾಗಿರಬೇಕು ಮತ್ತು ಅಂತಿಮ ವರ್ಷದ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು. ಈ ಕೋರ್ಸುಗಳಿಗೆ ಸೆಮಿಸ್ಟರ್ ಪದ್ದತಿ ಇದ್ದಲ್ಲಿ ಎಲ್ಲಾ ಸೆಮಿಸ್ಟರ್‍ಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪಾಸಾಗಿರಬೇಕು ಮತ್ತು ಅಂತಿಮ ವರ್ಷದ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು. ಎಲ್ಲಾ ಕೋರ್ಸುಗಳಲ್ಲಿ ಪ್ರತಿ ವರ್ಷದ ಪರೀಕ್ಷೆ ಅಥವಾ ಸೆಮಿಸ್ಟರ್‍ಗಳಲ್ಲಿ ಕಂಪರ್ಟ್‍ಮೆಂಟಲ್, ಕ್ಯಾರಿ ಓವರ್ ಸಿಸ್ಟಮ್ ರಡಿ ಪಾಸಾಗಿದ್ದರೆ ಅಂತಹವರು ಬಹುಮಾನ ಹಣ ಪಡೆಯಲು ಅರ್ಹರಿರುವುದಿಲ್ಲ. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿ ಈ ಕೋರ್ಸುಗಳನ್ನು ಹೊರ ರಾಜ್ಯಗಳಲ್ಲಿ ವ್ಯಾಸಂಗ ಮಾಡಿದ್ದರೂ ಸಹ ಅರ್ಹರಾಗಿರುತ್ತಾರೆ. ಆದರೆ ಹೊರ ದೇಶಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಈ ಯೋಜನೆಯಡಿ ಬಹುಮಾನ ಹಣ ಪಡೆಯಲು ಅರ್ಹರಲ್ಲ. ರಾಜ್ಯ, ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯ, ಯುಜಿಸಿ ಯಿಂದ ಪಡೆದ ಡೀಮ್ಡ್ ವಿಶ್ವ ವಿದ್ಯಾಲಯಗಳಡಿ ಬರುವ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಸ್ವಾಯತ್ತ ವಿದ್ಯಾ ಸಂಸ್ಥೆಗಳಿಗೆ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಿರುತ್ತಾರೆ. ಸರ್ಕಾರದಿಂದ ಮಾನ್ಯತೆ ಪಡೆಯದಿರುವ ವಿದ್ಯಾ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಈ ಯೋಜನೆಯಡಿ ಅರ್ಹರಿರುವುದಿಲ್ಲ. ವಿದ್ಯಾರ್ಥಿಯು ವ್ಯಾಸಂಗ ಮಾಡಿದ ಶೈಕ್ಷಣಿಕ ಸಂಸ್ಥೆ ಯಾವ ಜಿಲ್ಲೆಯಲ್ಲಿ ಇರುತ್ತದೆಯೋ ಅದೇ ಜಿಲ್ಲೆಯ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇವರಿಗೆ ಅರ್ಜಿ ಸಲ್ಲಿಸಬೇಕು. ಹೊರ ರಾಜ್ಯಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.
ಅಗತ್ಯ ದಾಖಲಾತಿಗಳು : ದ್ವಿತೀಯ ಪಿಯುಸಿ ತರಗತಿಗೆ ಅಭ್ಯರ್ಥಿಯ ಭಾವಚಿತ್ರ, ಅಂಕಪಟ್ಟಿ, ದ್ವಿತೀಯ ಪಿಯುಸಿ ಅಂಕಪಟ್ಟಿ, ಆಧಾರ್ ಪ್ರತಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕ. ಪದವಿ, ಸ್ನಾತಕೋತ್ತರ, ಪದವಿ, ಕೃಷಿ, ಪಶು ಸಂಗೋಪನೆ, ಇಂಜಿನಿಯರಿಂಗ್, ಮೆಡಿಕಲ್ ವಿದ್ಯಾರ್ಥಿಗಳಗಿಗೆ ಭಾವಚಿತ್ರ, ಎಲ್ಲಾ ಸೆಮ್‍ಗಳ ಅಂಕಪಟ್ಟಿ, ಆಧಾರ್ ಪ್ರತಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕ.
ವಿದ್ಯಾರ್ಥಿಗಳು www.sw.kar.nic.in ನಲ್ಲಿ ಅರ್ಜಿ ಸಲ್ಲಿಸುವಾಗ ಯಾವುದಾದರೂ ತಾಂತ್ರಿಕ ತೊಂದರೆಯಾದಲ್ಲಿ ಇಲಾಖೆಯ ಟೋಲ್‍ಫ್ರೀ ದೂ.ಸಂ. 080-22634300, 080-22353757 ಅಥವಾ ಸಹಾಯಕ ನಿರ್ದೇಶಕರು(ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ದೂ.ಸಂ: 9480843156 ಮತ್ತು 08276-281115 ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
