78 ಕೋಟಿ ರೂ. ಗಳಲ್ಲಿ ಕೊಡಗಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿ

09/09/2020

ಮಡಿಕೇರಿ ಸೆ. 9 :-ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೊಡಗು ಜಿಲ್ಲೆಗೆ ರಸ್ತೆ ಕಾಮಗಾರಿಗಳಿಗೆ 78 ಕೋಟಿ ರೂ. ಬಿಡುಗಡೆಯಾಗಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದ ರಸ್ತೆ ಕಾಮಗಾರಿಗಳಿಗೆ ಸಂಸದರಾದ ಪ್ರತಾಪ್ ಸಿಂಹ ಮತ್ತು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಬುಧವಾರ ಚಾಲನೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಮುರುಳಿ ಕರುಂಬಮ್ಮಯ್ಯ, ತಾ.ಪಂ.ಅಧ್ಯಕ್ಷರಾದ ತೆಕ್ಕಡೆ ಶೋಭ ಮೋಹನ್, ಪ್ರಮುಖರಾದ ರಾಬಿನ್ ದೇವಯ್ಯ, ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಇದ್ದರು.
ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಲಮುರಿ-ಹೊದವಾಡ ಶಾಲೆ ಮಾರ್ಗದ ಹೊದ್ದೂರು ರಸ್ತೆ ಅಭಿವೃದ್ಧಿ, ಸುಂಟಿಕೊಪ್ಪ ಅಯ್ಯಪ್ಪ ದೇವಸ್ಥಾನದಿಂದ ಕಾನ್‍ಬೈಲು-ಬೈಚನಹಳ್ಳಿ- ನಾಕೂರು ಶಿರಂಗಾಲ ಮಾರ್ಗ ರಸ್ತೆ, ಅಂದಗೋವೆ-ಮೆಟ್ನಳ್ಳ-ಕಂಬಿಬಾಣೆ ರಸ್ತೆ, ಕರ್ಕಳ್ಳಿಯಿಂದ ಎಸ್‍ಎಚ್ ರಸ್ತೆ-ಕುಶಾಲನಗರ ಮಾರ್ಗದ ರಸ್ತೆ, ಸುಂಟಿಯಿಂದ-ಬಸವನಕೊಪ್ಪ-ಶಾಂತವೇರಿ-ಗೋಂದಳ್ಳಿ ಮಾರ್ಗದ ರಸ್ತೆ, ಒಂದನೇ ಕೂಡ್ಲೂರಿನಿಂದ ಹಂಡ್ಲಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದರು ಮತ್ತು ಶಾಸಕರು ಚಾಲನೆ ನೀಡಿದರು.
ಬಲಮುರಿಯಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಸಂಸದರಾದ ಪ್ರತಾಪ್ ಸಿಂಹ ಅವರು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಪ್ರತೀ ತಾಲ್ಲೂಕಿನಲ್ಲಿ 5 ಕಡೆಗಳಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ ಎಂದು ಅವರು ತಿಳಿಸಿದರು.
ಕೇಂದ್ರದಿಂದ ಶೇ.60 ರಷ್ಟು, ರಾಜ್ಯದಿಂದ ಶೇ.40 ರಷ್ಟು ಸಂಯುಕ್ತವಾಗಿ ರಸ್ತೆ ಕಾಮಗಾರಿಗೆ ಹಣ ವಿನಿಯೋಗಿಸಲಾಗುತ್ತದೆ ಎಂದು ಪ್ರತಾಪ್ ಸಿಂಹ ಅವರು ತಿಳಿಸಿದರು.
ಕಾಮಗಾರಿ ನಂತರ ಐದು ವರ್ಷದವರೆಗೆ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು ನಿರ್ವಹಿಸುತ್ತಾರೆ. ಉತ್ತಮ ಹಾಗೂ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಸಂಸದರು ಹೇಳಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 31 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಬಲಮುರಿ, ಸುಂಟಿಕೊಪ್ಪ, ಅಂದಗೋವೆ, ಕರ್ಕಳ್ಳಿ, ಸುಂಟಿಯಿಂದ ಗೋಂದಳ್ಳಿ ಹಾಗೂ 1 ನೇ ಕೂಡ್ಲೂರು ಹಂಡ್ಲಿ ಮಾರ್ಗದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸಬೇಕಿದೆ. ಆ ನಿಟ್ಟಿನಲ್ಲಿ ರಸ್ತೆಯ ಎರಡು ಬದಿ ತಲಾ 16 ಅಡಿ ಜಾಗ ಬಿಟ್ಟುಕೊಡಬೇಕಿದೆ ಎಂದು ಶಾಸಕರು ಕೋರಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೆ.ಟಿ.ಪ್ರಭು, ಸಹಾಯಕ ಅಭಿಯಂತರರಾದ ಪಿ.ಬಿ.ಪೂವಯ್ಯ, ಅಶೋಕ್ ರೆಡ್ಡಿ ಇತರರು ಇದ್ದರು.
ಬಳಿಕ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಮಾಹಿತಿ ನೀಡಿದ ಪ್ರತಾಪ್ ಸಿಂಹ ಅವರು ಪರಸ್ಪರ ದೂಷಿಸುವುದನ್ನು ಬಿಟ್ಟು ಡ್ರಗ್ಸ್ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಅವರು ಮನವಿ ಮಾಡಿದರು.
ಮಡಿಕೇರಿ ದಸರಾ ಸಂಬಂಧಿಸಿದಂತೆ ಯಾವುದೇ ತೀರ್ಮಾನವಾಗಿಲ್ಲ. ಆದರೆ ಸರಳವಾಗಿ ಆಚರಿಸಬೇಕಿದೆ. ಕೋವಿಡ್-19 ಇರುವುದರಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಪ್ರತಾಪ್ ಸಿಂಹ ಅವರು ನುಡಿದರು.
ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಡ್ರಗ್ಸ್ ವಿಚಾರ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ಯಾರೇ ಆದರೂ ತಪ್ಪಿತಸ್ಥರಾಗಿದ್ದಲ್ಲಿ ಕನಿಷ್ಠ 6 ತಿಂಗಳಾದರೂ ಜೈಲಿಗೆ ಹಾಕಬೇಕು ಎಂದು ಅವರು ಸಲಹೆ ಮಾಡಿದರು.
ಸಿನಿಮಾದಲ್ಲಿ ತೊಡಗಿಸಿಕೊಂಡು ಸಂಪಾದಿಸಿರುವ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಅದನ್ನು ಬಿಟ್ಟು ಡ್ರಗ್ಸ್ ನಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜ ಕಂಟಕವಾಗುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಮಡಿಕೇರಿ ದಸರಾ ಸಂಬಂಧಿಸಿದಂತೆ ಸಭೆ ನಡೆದಿಲ್ಲ. ಮಡಿಕೇರಿ ದಸರಾವನ್ನು ಸರಳವಾಗಿ ಆಚರಿಸಬೇಕಿದೆ ಎಂದು ಅವರು ಹೇಳಿದರು.