ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೆ.ಎಸ್.ರಮೇಶ್ ಹೊಳ್ಳ ಪದಗ್ರಹಣ

09/09/2020

ಮಡಿಕೇರಿ ಸೆ. 9 : ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಕೆ.ಎಸ್ ರಮೇಶ್ ಹೊಳ್ಳ ಅವರು ಬುಧವಾರ ಮೂಡಾ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭ ಮಾತನಾಡಿದ ರಮೇಶ್ ಹೊಳ್ಳ ಅವರು ಏಜೆಂಟರ ಹಸ್ತಕ್ಷೇಪ ಇಲ್ಲದೆ ನೇರವಾಗಿ ಕಚೇರಿ ಸಂಪರ್ಕಿಸಿ ಕೆಲಸ ಕಾರ್ಯ ಮಾಡಿಕೊಳ್ಳಿ. ಮಧ್ಯವರ್ತಿಗಳ ಅಗತ್ಯ ಇನ್ನು ಮುಂದೆ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇರುವುದಿಲ್ಲ ಎಂದು ಹೇಳಿದರು.
ಅಂತೆಯೇ ಮೂಡಾಕ್ಕೆ ಸ್ವಂತ ಕಚೇರಿಯನ್ನೂ ತನ್ನ ಅಧಿಕಾರವಧಿಯಲ್ಲಿ ನಿರ್ಮಿಸುವ ಯೋಜನೆ ರೂಪಿಸಲಾಗುತ್ತದೆ. ಕಡತಗಳನ್ನು ವಿಳಂಬರಹಿತವಾಗಿ ವಿಲೇವಾರಿ ಮಾಡಲೂ ಕ್ರಮಕೈಗೊಳ್ಳಲಾಗುತ್ತದೆ ಎಂದು ರಮೇಶ್ ಹೊಳ್ಳ ಅವರು ಹೇಳಿದರು.
ಸರಳ ಕಾರ್ಯಕ್ರಮದಲ್ಲಿ ಕೆ.ಎಸ್ ರಮೇಶ್ ಹೊಳ್ಳ ಅವರಿಗೆ ಮಡಿಕೇರಿಯ ಹಿರಿಯ ವೈದ್ಯರಾದ ಡಾ.ಎಂ.ಜಿ.ಪಾಟ್ಕರ್, ಪ್ರಮುಖರಾದ ರಾಬಿನ್ ದೇವಯ್ಯ, ಬಿ.ಬಿ ಭಾರತೀಶ್, ಬೆಪ್ಪೂರನ ಮೇದಪ್ಪ, ರವೀಂದ್ರ ರೈ, ಕೆ.ಎಸ್. ದೇವಯ್ಯ, ಮಡಿಕೇರಿ ನಗರಾಭಿವೃದ್ಧಿ ಆಯುಕ್ತರಾದ ಶೇಷು ಅವರು ಶುಭಹಾರೈಸಿದರು.
3 ವರ್ಷಗಳ ಕಾಲ ರಮೇಶ್ ಹೊಳ್ಳ ಅವರು ಮೂಡಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಮೊದಲು ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿಯೂ ರಮೇಶ್ ಹೊಳ್ಳ ಅವರು ಕಾರ್ಯನಿರ್ವಹಿಸಿದ್ದರು.