ಮರಗಳ ಸಾಗಾಟಕ್ಕೆ ಅವಕಾಶ ಕಲ್ಪಿಸಲು ಜೆಡಿಎಸ್ ಒತ್ತಾಯ

09/09/2020

ಮಡಿಕೇರಿ : ಬಿದ್ದಿರುವ ಮರಗಳನ್ನು ಕೊಡಗಿನಿಂದ ಸಾಗಾಟ ಮಾಡಲು ಜಿಲ್ಲಾಡಳಿತ ಅನುಮತಿ ನೀಡಬೇಕೆಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಒತ್ತಾಯಿಸಿದ್ದಾರೆ. ಕೋವಿಡ್ ಮಾರ್ಗಸೂಚಿ ಮತ್ತು ಅತಿಯಾದ ಮಳೆಯ ಕಾರಣ ಕೊಡಗಿನಲ್ಲಿ ಮರಗಳ ಸಾಗಾಟಕ್ಕೆ ಕಳೆದ ಐದು ತಿಂಗಳುಗಳಿಂದ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಟಿಂಬರ್ ಕ್ಷೇತ್ರವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವ ಮರಗೆಲಸದವರು ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಮರ ಸಾಗಾಟಕ್ಕೆ ಅನುಮತಿ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಸಿಲ್ವರ್ ಸೇರಿದಂತೆ ಯಾವೆಲ್ಲ ಮರಗಳನ್ನು ಸಾಗಾಟ ಮಾಡಲು ಸರ್ಕಾರದ ನಿಯಮದಂತೆ ಅವಕಾಶವಿದೆಯೋ ಆ ಮರಗಳನ್ನಾದರೂ ಕೊಂಡೊಯ್ಯಲು ಅವಕಾಶ ನೀಡಬೇಕು. ವಿನಾಕಾರಣ ಕೊಡಗು ಜಿಲ್ಲೆಗೆ ಮಾತ್ರ ಸೀಮಿತವಾಗಿ ನಿರ್ಬಂಧಗಳನ್ನು ಹೇರುವುದರಿಂದ ರೈತರು ಹಾಗೂ ಬೆಳೆಗಾರರೊಂದಿಗೆ ಕಾರ್ಮಿಕರು ಕೂಡ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಬಿದ್ದ ಮರಗಳು ಹಾವಾಗುಣ ವೈಪರೀತ್ಯದಿಂದ ಹಾಳಾದರೆ ಸಂಬಂಧಿಸಿದ ಎಲ್ಲರಿಗೂ ನಷ್ಟವಾಗಲಿದೆ. ಕಳೆದ ಐದು ತಿಂಗಳುಗಳಿಂದ ಕೆಲಸವಿಲ್ಲದೆ ಪರದಾಡುತ್ತಿರುವ ಟಿಂಬರ್ ಕೆಲಸಗಾರರ ಬಗ್ಗೆಯೂ ಸರ್ಕಾರ ಕರುಣೆ ತೋರಬೇಕಾಗಿದೆ ಎಂದು ತಿಳಿಸಿರುವ ಗಣೇಶ್, ಬೇರೆ ಯಾವುದೇ ಜಿಲ್ಲೆಗಳಲ್ಲಿ ಇಲ್ಲದ ನಿರ್ಬಂಧಗಳು ಕೊಡಗಿಗೆ ಮಾತ್ರ ಸೀಮಿತವೇಕೆ ಎಂದು ಪ್ರಶ್ನಿಸಿದ್ದಾರೆ.
ಬಡ ಕಾರ್ಮಿಕರು, ಲಾರಿ ಸಿಬ್ಬಂದಿಗಳು ಮತ್ತು ಬೆಳೆಗಾರರ ಹಿತ ಕಾಯಲು ತಕ್ಷಣ ಮರ ಸಾಗಾಟಕ್ಕೆ ಅನುಮತಿ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.