ಚೇರಂಗಾಲ ಗ್ರಾಮಕ್ಕೆ ಎಂಎಲ್ಸಿ ವೀಣಾಅಚ್ಚಯ್ಯ ಭೇಟಿ : ಮಳೆಹಾನಿ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುವ ಭರವಸೆ

ಮಡಿಕೇರಿ ಸೆ.9 : ಕೊಡಗು ಜಿಲ್ಲೆ ಅತಿವೃಷ್ಟಿಯಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ತಿಳಿಸಿದ್ದಾರೆ.
ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಗಾಳಿ ಮಳೆಯಿಂದ ಹಾನಿಗೊಳಗಾದ ಭಾಗಮಂಡಲದ ಚೇರಂಗಾಲ, ಕೋಳಿಕಾಡು ಗ್ರಾಮಕ್ಕೆ ಭೇಟಿ ನೀಡಿದ ಅವರು ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು.
ಮಹಾಮಳೆಯಿಂದ ಜಿಲ್ಲೆಯಲ್ಲಿ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಜನಸಾಮಾನ್ಯರು, ರೈತರು, ಬೆಳೆಗಾರರು, ಕಾರ್ಮಿಕರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಜಿಲ್ಲೆಗೆ ಹೆಚ್ಚಿನ ಮೊತ್ತದ ಪರಿಹಾರದ ಅಗತ್ಯವಿದ್ದು, ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.
ಗುಡ್ಡ ಕುಸಿದ ಪರಿಣಾಮ ಕೆಸರು, ಮರಳು, ಕಲ್ಲು, ಮರಗಳಿಂದ ಗದ್ದೆ ಮತ್ತು ತೋಟಗಳು ಆವೃತ್ತವಾಗಿದ್ದು, ಮುಂದೆ ಕೃಷಿ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದರು. ಪಡಿತರ ಚೀಟಿ ಗೊಂದಲದ ಬಗ್ಗೆಯೂ ಗ್ರಾಮಸ್ಥರು ಗಮನ ಸೆಳೆದರು.
ಈ ಸಂದರ್ಭ ಪ್ರಮುಖರಾದ ವಿಕಾಸ್ ಅಚ್ಚಯ್ಯ, ದೇವಂಗುಡಿ ಹರ್ಷ, ಅಬ್ದುಲ್ ಲತೀಫ್ ಭಾಗಮಂಡಲ, ಹ್ಯಾರಿಸ್ ಚೆಟ್ಟಿಮಾನಿ, ರಂಗಪ್ಪ, ನಿಡ್ಯಮಲೆ ಮೀನಾಕ್ಷಿ, ವಿಜಯ, ಮತ್ತಿತರರು ಹಾಜರಿದ್ದರು.