ದುರಾಡಳಿತದಿಂದ ಜನ ಬೇಸತ್ತಿದ್ದಾರೆ : ಕೊಡಗು ಕಾಂಗ್ರೆಸ್ ಟೀಕೆ

10/09/2020

ಮಡಿಕೇರಿ ಸೆ.9 : ಮುಂಬರುವ ಗ್ರಾ.ಪಂ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಮತ್ತು ಕೊಡಗನ್ನು ಬಿಜೆಪಿ ಮುಕ್ತಗೊಳಿಸಲು ಜಿಲ್ಲಾ ಕಾಂಗ್ರೆಸ್ ಅಗತ್ಯ ರೂಪು ರೇಷೆಗಳನ್ನು ಹಾಕಿಕೊಂಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಮತ್ತು ನರಾಜ್ಯ ಸರ್ಕಾರದ ದುರಾಡಳತದಿಂದ ಜನ ಬೇಸತ್ತಿದ್ದಾರೆ. ಜನರು ಪ್ರಶ್ನೆ ಮಾಡುವ ಹಂತದಲ್ಲೇ ಹಾದಿ ತಪ್ಪಿಸುವ ಉದ್ದೇಶದಿಂದ ಕೋವಿಡ್ ಸೋಂಕಿನ ಸಮಸ್ಯೆಯನ್ನು ಸರ್ಕಾರ ದೊಡ್ಡ ಮಟ್ಟದಲ್ಲಿ ಪ್ರತಿಬಿಂಬಿಸುತ್ತಿದೆ ಎಂದು ಆರೋಪಿಸಿದರು.
ಕೊರೋನಾ ಸಂಕಷ್ಟ ವಿಕೋಪಕ್ಕೆ ಹೋಗಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೇಜವಾಬ್ದಾರಿಯೇ ಪ್ರಮುಖ ಕಾರಣವೆಂದು ಟೀಕಿಸಿದರು.
ಈ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಕಾಂಗ್ರೆಸ್ ಕಾರ್ಯಕರ್ತರು ಮನೆಯಲ್ಲಿ ಕುಳಿತುಕೊಳ್ಳದೆ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಕಷ್ಟದಲ್ಲಿರುವ ಕಾರ್ಮಿಕ ಸಮೂಹಕ್ಕೆ, ಬಡವರ್ಗದ ಮಂದಿಗೆ ಅಗತ್ಯ ನೆರವನ್ನು ನೀಡಲಾಗಿದೆ. ಆ ಮೂಲಕ ಅಧಿಕಾರ ಇದ್ದರೂ ಇಲ್ಲದಿದ್ದರೂ ಕಾಂಗ್ರೆಸ್ಸಿಗರಾದ ನಾವು ಜನರೊಂದಿಗೇ ಇದ್ದೇವೆ ಎಂದು ಮಂಜುನಾಥ್ ಕುಮಾರ್ ಹೇಳಿದರು.
ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಜಿಲ್ಲೆಯ ಜನ ಕಾಂಗ್ರೆಸ್ ನ್ನು ಬೆಂಬಲಿಸಲಿದ್ದು, ಕೊಡಗು ಬಿಜೆಪಿ ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
::: ಆರೋಗ್ಯ ತಪಾಸಣೆ :::
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮುಂದಾಳತ್ವದಲ್ಲಿ ಮಹತ್ವಾಕಾಂಕ್ಷಿ ‘ಆರೋಗ್ಯ ಹಸ್ತ’ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸುತ್ತಿದ್ದು, ಪ್ರತಿ ಪಂಚಾಯ್ತಿಯಲ್ಲಿ ಇಬ್ಬರು ಕೊರೊನಾ ಯೋಧರನ್ನು ನಿಯುಕ್ತಿಗೊಳಿಸಿ, ಜನ ಸಾಮಾನ್ಯರ ಆರೋಗ್ಯ ತಪಾಸಣಾ ಕಾರ್ಯವನ್ನು ಮಾಡಲಾಗಿದೆ. ಜಿಲ್ಲೆಯ 104 ಗ್ರಾಪಂ, 3 ಪ.ಪಂ ಮತ್ತು ಒಂದು ನಗರಸಭೆಯಲ್ಲಿ ಒಟ್ಟು 116 ಕೊರೊನಾ ಯೋಧರ ತಂಡವನ್ನು ಮಾಡಲಾಗಿದ್ದು, ಒಟ್ಟು 230 ಕಾಂಗ್ರೆಸ್ ಕಾರ್ಯಕರ್ತರು ಕೊರೋನಾ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮೂಲಕ ಇಲ್ಲಿಯವರೆಗೆ 20 ಸಾವಿರಕ್ಕಿಂತಲೂ ಹೆಚ್ಚಿನ ಕುಟುಂಬಗಳ ಆರೋಗ್ಯ ಪರೀಕ್ಷೆ ಮಾಡಲಾಗಿದೆ. ಈ ಕಾರ್ಯಕ್ರಮ ಸೆಪ್ಟೆಂಬರ್ ಅಂತ್ಯ ಇಲ್ಲವೆ ಮುಂದಿನ ತಿಂಗಳ ಮೊದಲೆರಡು ವಾರಗಳಲ್ಲಿ ಮುಕ್ತಯಗೊಳ್ಳಲಿದೆ. ಕೊರೊನಾ ಯೋಧರಿಗೆ ಪಕ್ಷದಿಂದ ತಲಾ 1 ಲಕ್ಷ ರೂ.ಗಳ ವಿಮೆ ಮಾಡಲಾಗಿದೆ ಎಂದು ತಿಳಿಸಿದರು.
::: ನಾಳೆ ಕೆಪಿಸಿಸಿ ಕಾರ್ಯಾಧ್ಯಕ್ಷರ ಭೇಟಿ :::
ಸೆ.11 ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಕೊಡಗಿಗೆ ಭೇಟಿ ನೀಡಲಿದ್ದು, ಅವರನ್ನು ಅಂದು ತಿತಿಮತಿ ಗೇಟ್‍ನಲ್ಲಿ ಸ್ವಾಗತಿಸಲಾಗುತ್ತದೆ. ಅವರು ಮಧ್ಯಾಹ್ನ 3 ಗಂಟೆಗೆ ಗೋಣಿಕೊಪ್ಪಲಿನಲ್ಲಿ ನಡೆಯಲಿರುವ ಆರೋಗ್ಯ ಹಸ್ತ ಕಾರ್ಯಕ್ರಮ, ಸಂಜೆ 4 ಕ್ಕೆ ಮೂರ್ನಾಡುವಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಸಂಜೆ 5 ಗಂಟೆಗೆ ನಗರದ ಹೊಟೇಲ್ ವ್ಯಾಲಿವ್ಯೂನಲ್ಲಿ ಪಕ್ಷ ಸಂಘಟನೆ, ಪಕ್ಷದ ಬೆಳವಣಿಗೆ ಬಗ್ಗೆ ಹಾಗೂ ಆರೋಗ್ಯ ಹಸ್ತ ಕಾರ್ಯಕ್ರಮದ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಸಂಜೆ 5.30ಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಂಜುನಾಥ್ ಕುಮಾರ್, ಬಿಜೆಪಿ ಪಕ್ಷದ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗ ಮಾಡಿದ್ದು, ದೊಡ್ಡ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದತ್ತ ಒಲವು ತೋರಿದ್ದಾರೆ. ಕಾಂಗ್ರೆಸ್ ಪಕ್ಷದ ತತ್ತ್ವ ಸಿದ್ಧಾಂತ, ನಿಲುವುಗಳನ್ನು ಒಪ್ಪಿಕೊಂಡು ಯಾವುದೇ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಬರುವುದಿದ್ದಲ್ಲಿ ಅವರನ್ನು ಸ್ವಾಗತಿಸುವುದಾಗಿ ತಿಳಿಸಿದರು.
ಮಾಜಿ ಸಚಿವರೊಬ್ಬರು ಕಾಂಗ್ರೆಸ್‍ನತ್ತ ಮುಖ ಮಾಡಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಕೆ.ಕೆ.ಮಂಜುನಾಥ್ ಕುಮಾರ್, ಪಕ್ಷದ ವರಿಷ್ಟರು ಅವರೊಂದಿಗೆ ಮಾತುಕತೆ ನಡೆಸಿದ್ದು, ಜಿಲ್ಲಾ ಕಾಂಗ್ರೆಸ್ ಈಗಾಗಲೆ ಮಾಜಿ ಸಚಿವರ ಆಗಮನಕ್ಕೆ ಹಸಿರು ನಿಶಾನೆಯನ್ನು ತೋರಿರುವುದಾಗಿ ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಜೆಎಇಎಸ್ ಪಕ್ಷ ತನ್ನ ಸತ್ತ್ವ ಕಡೆದುಕೊಂಡಿದ್ದು, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರಿಗೂ ಅದು ತಿಳಿದಿದೆ. ಆ ಪಕ್ಷದ ಹಲವು ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಖಜಾಂಚಿ ಹೆಚ್.ಎಂ.ನಂದಕುಮಾರ್, ವಕ್ತಾರ ಟಿ.ಇ.ಸುರೇಶ್, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಗೀತಾ ಧರ್ಮಪ್ಪ ಹಾಗೂ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಯೋಜಕ ಹೊಸೂರು ಸೂರಜ್ ಉಪಸ್ಥಿತರಿದ್ದರು.