ಮಿತಿ ಮೀರಿದ ಭ್ರಷ್ಟಾಚಾರ : ಕರ್ನಾಟಕ ರಾಷ್ಟ್ರ ಸಮಿತಿ ಆರೋಪ

10/09/2020

ಮಡಿಕೇರಿ ಸೆ.10 : ಭ್ರಷ್ಟ ವ್ಯವಸ್ಥೆಯಲ್ಲಿ ರಾಜ್ಯ ನಲುಗುತ್ತಿದ್ದು, ಜನಸಾಮಾನ್ಯರು ನಿತ್ಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸಲು ಮತ್ತು ರಾಜ್ಯವನ್ನು ಅಭ್ಯುದಯದೆಡೆಗೆ ಕೊಂಡೊಯ್ಯಲು ‘ಚಲಿಸು ಕರ್ನಾಟಕ’ ಘೋಷ ವಾಕ್ಯದೊಂದಿಗೆ ಸೈಕಲ್ ಯಾತ್ರೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರೈತ ಘಟಕದ ರಾಜ್ಯಾಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ ಅವರು ರಾಜ್ಯಾದ್ಯಂತ 2700 ಕಿ.ಮೀ. ಸಂಚರಿಸುವ ಸೈಕಲ್ ಯಾತ್ರೆ ಸೆ.14 ರಿಂದ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಕೋವಿಡ್ ಮುಖವಾಡದ ಹಿಂದೆ ಭ್ರಷ್ಟಾಚಾರ ಮಿತಿ ಮೀರಿದ್ದು, ಸೋಂಕು ನಿಯಂತ್ರಣದ ಹೆಸರಿನಲ್ಲಿ ಹಣವನ್ನು ಲೂಟಿ ಮಾಡಲಾಗುತ್ತಿದೆ. ಕೇವಲ ಅಧಿಕಾರ ಮತ್ತು ಹಣ ಮಾಡುವುದಕ್ಕಷ್ಟೇ ಸೀಮಿತವಾಗಿ ಆಡಳಿತ ವ್ಯವಸ್ಥೆ ನಡೆಯುತ್ತಿದೆ ಎಂದು ಆರೋಪಿಸಿದರು. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ, ಉದ್ಯಮಗಳು, ವ್ಯಾಪಾರ ವಹಿವಾಟುಗಳು ನೆಲ ಕಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ನಿರ್ಭಯವಾದ ಭ್ರಷ್ಟಾಚಾರ ಮುಕ್ತ ಸಮಾಜವನ್ನು ಕಟ್ಟುವ ಅಗತ್ಯವಿದೆ ಎಂದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಷ್ಟ್ರಾಧ್ಯಕ್ಷÀ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಸೆ.14 ರಂದು ಕೋಲಾರದಲ್ಲಿ ಮೊದಲ ಹಂತದ “ಚಲಿಸು ಕರ್ನಾಟಕ” ಸೈಕಲ್ ಯಾತ್ರೆ ಆರಂಭಗೊಳ್ಳಲಿದೆ. ಈ ಯಾತ್ರೆ ಚಿಕ್ಕಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಬೆಂಗಳೂರು, ರಾಮನಗರ, ಮಂಡ್ಯ ಜಿಲ್ಲೆಗಳನ್ನು ಹಾದು ಸೆ.19 ರಂದು ಟಿ. ನರಸೀಪುರ, ಸೆ.21 ರಂದು ಪಿರಿಯಾಪಟ್ಟಣದ ಮೂಲಕ ಸೆ.24 ರಂದು ಕೊಡಗನ್ನು ಪ್ರದೇಶಿಸಲಿದೆ. ನಂತರ ಸೋಮವಾರಪೇಟೆ, ಶನಿವಾರಸಂತೆಯ ಮೂಲಕ ಹಾಸನ ಜಿಲ್ಲೆಯ ಅರಕಲಗೂಡಿಗೆ ತೆರಳಲಿದೆ ಎಂದು ಮಾಹಿತಿ ನೀಡಿದರು.
ಯಾತ್ರೆ ಸಾಗುವೆಡೆ ಜನಜಾಗೃತಿಯ ಕಾರ್ಯಕ್ರಮಗಳು ನಡೆಯಲಿದೆ. ದ್ವಿತೀಯ ಹಂತದ ಯಾತ್ರೆ ಅ.5 ರಿಂದ ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಾಗಲಿದೆ. ನ.23 ರಿಂದ ನಡೆಯುವ ಮೂರನೇ ಹಂತದ ಯಾತ್ರೆಯು ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ನಡೆಯಲಿದೆ. ಈ ಯಾತ್ರೆಯ ಸಂದರ್ಭ ಕೋವಿಡ್‍ಗೆ ಸಂಬಂಧಿಸಿದಂತೆ ಎಲ್ಲಾ ಮುಂಜಾಗ್ರತೆಗಳನ್ನು ಕೈಗೊಳ್ಳುವುದಲ್ಲದೆ, ನಿಬಂಧನೆಗಳನ್ನು ಪಕ್ಷ ಪಾಲಿಸಲಿದೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಕೆ.ಎಸ್.ಸೋಮಸುಂದರ್, ಯುವ ಘಟಕದ ರಾಜ್ಯ ಕಾರ್ಯದರ್ಶಿ ಮೋಹನ್ ಕುಮಾರ್, ರೈತ ಘಟಕದ ಪಿರಿಯಾಪಟ್ಟಣ ವಿಭಾಗದ ಉಪಾಧ್ಯಕ್ಷ ದೇವರಾಜ್ ಹಾಗೂ ಕಾರ್ಯದರ್ಶಿ ಪ್ರಭುಸ್ವಾಮಿ ಉಪಸ್ಥಿತರಿದ್ದರು.