ನಾನು ಜೆಡಿಎಸ್ ನ ಪ್ರಾಮಾಣಿಕ ಕಾರ್ಯಕರ್ತ : ಸಂಕೇತ್ ಪೂವಯ್ಯ ಸ್ಪಷ್ಟನೆ

10/09/2020

ಮಡಿಕೇರಿ ಸೆ.10 : ಜಾತ್ಯತೀತ ಜನತಾದಳದ ಪ್ರಾಥಮಿಕ ಸದಸ್ಯತ್ವದಿಂದ ಹೊರ ಬಾರದೆ ಇರುವುದರಿಂದ ನಾನು ಎಂದೆಂದಿಗೂ ಪ್ರಾಮಾಣಿಕ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತೇನೆ. ಅಲ್ಲದೆ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು ಪಕ್ಷ ಸಂಘಟನೆಗಾಗಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಸ್ವಾಗತಿಸುತ್ತೇನೆ ಎಂದು ಪಕ್ಷದ ಮಾಜಿ ಅಧ್ಯಕ್ಷ ಸಂಕೇತ್ ಪೂವಯ್ಯ ಸ್ಪಷ್ಟಪಡಿಸಿದ್ದಾರೆ.
ಗಣೇಶ್ ಅವರೊಂದಿಗೆ ರಾಜಕೀಯ ಸಮಾಲೋಚನೆ ನಡೆಸಿದ ನಂತರ ಮಾತನಾಡಿದ ಅವರು ಪಕ್ಷದ ಜವಾಬ್ದಾರಿಯುತ ಕಾರ್ಯಕರ್ತನಾಗಿ ಇನ್ನು ಮುಂದೆಯೂ ಕಾರ್ಯನಿರ್ವಹಿಸಲಿದ್ದೇನೆ. ಜೆಡಿಎಸ್ ಕೊಡಗಿನಲ್ಲಿ ಸಂಘಟನೆಯಾಗದ ಸಂದರ್ಭದಲ್ಲೇ 11,228 ಮತಗಳನ್ನು ನೀಡಿದ ಮತದಾರರ ಋಣ ತೀರಿಸಲು ಕೊನೆಯವರೆಗೂ ಶ್ರಮಿಸುತ್ತೇನೆ. ಜಿಲ್ಲೆಯ ಜನ ಸಂಕಷ್ಟಕ್ಕೆ ಸಿಲುಕಿದ್ದು, ಕಣ್ಣೀರೊರೆಸುವ ಕಾರ್ಯವನ್ನು ಮಾಡಲಿದ್ದೇನೆ ಎಂದರು.
ಕೊಡಗು ಜಿಲ್ಲೆಯ ಜನ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಪ್ರಮಾಣಿಕ ಹೋರಾಟ ಮತ್ತು ಜಾತ್ಯತೀತ ಶಕ್ತಿಯನ್ನು ಕೊಡಗು ಜಿಲ್ಲೆಯಲ್ಲಿ ಕಟ್ಟಲು ಅತ್ಯಂತ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಕೆ.ಎಂ.ಗಣೇಶ್ ಅವರು ಪಕ್ಷ ಸಂಘಟನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಸದಾ ಸಹಕಾರ ನೀಡುವುದಾಗಿ ಸಂಕೇತ್ ಪೂವಯ್ಯ ಭರವಸೆ ನೀಡಿದರು.
::: ಸರ್ಕಾರದ ನಿರ್ಲಕ್ಷ್ಯ :::
ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಿಲ್ಲೆಯನ್ನು ಕಡೆಗಣಿಸುತ್ತಲೇ ಬರುತ್ತಿದೆ, ಇಬ್ಬರು ಶಾಸಕರನ್ನು ಸರ್ಕಾರ ರಚಿಸಲಷ್ಟೇ ಬಳಸಿಕೊಳ್ಳಲಾಗುತ್ತಿದೆ. ಕೊಡಗು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತ್ತಾಗಿದೆ ಎಂದು ಅವರು ಇದೇ ಸಂದರ್ಭ ಆರೋಪಿಸಿದರು.
ಐದು ಬಾರಿ ಆಯ್ಕೆಯಾದ ಮಡಿಕೇರಿ ಶಾಸಕರು, ನಾಲ್ಕು ಬಾರಿ ಆಯ್ಕೆಯಾದ ವಿರಾಜಪೇಟೆ ಶಾಸಕರು ಹಾಗೂ ಎರಡು ಬಾರಿ ಗೆಲುವು ಸಾಧಿಸಿದ ಸಂಸದರು ತಮ್ಮ ತಮ್ಮ ಜವಾಬ್ದಾರಿಯನ್ನು ಮರೆತ್ತಿದ್ದಾರೆ. ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡರು ಸಂಸದರು ಬೆಳೆಗಾರರ ಕಣ್ಣೀರÀನ್ನು ಒರೆಸುವ ಯಾವ ಪ್ರಯತ್ನಗಳನ್ನೂ ಇಲ್ಲಿಯವರೆಗೆ ಮಾಡಿಲ್ಲ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚಿಸುವಲ್ಲಿಯೂ ಇವರು ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಜಾತಿ, ಧರ್ಮದ ಆಧಾರದಲ್ಲಿ ಜಿಲ್ಲೆಯಲ್ಲಿ ಮತದಾನವಾಗುತ್ತಿದ್ದು, ನಮ್ಮಂತಹ ನಿಷ್ಠಾವಂತರ ಹೋರಾಟಗಳಿಗೆ ಯಾವುದೇ ಬೆಲೆ ಸಿಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಆದರೂ ಸಂಕಷ್ಟದ ಸಮಾಜದ ನಡುವೆ ಒಬ್ಬ ಜವಾಬ್ದಾರಿಯುತ ನಾಗರೀಕನಾಗಿ ಕೆಲಸ ಮಾಡಲು ಎಂದಿಗೂ ಹಿಂಜರಿಯುವುದಿಲ್ಲ. ಆನೆ, ಮಾನವ ಸಂಘರ್ಷ, ವನ್ಯ ಜೀವಿಗಳ ದಾಳಿ, ರೈತರ ಆತ್ಮಹತ್ಯೆ, ಬೆಳೆ ನಾಶ, ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಹೋರಾಟಗಳಲ್ಲಿ ಭಾಗಿಯಾಗುವುದಾಗಿ ತಿಳಿಸಿದರು.