ಸೋಮವಾರಪೇಟೆ ಬ್ಲಾಕ್ ನಲ್ಲಿ ಆರೋಗ್ಯ ಹಸ್ತ ಯಶಸ್ವಿ

10/09/2020

ಸೋಮವಾರಪೇಟೆ ಸೆ.10 : ಕೆಪಿಸಿಸಿ ಅರೋಗ್ಯ ಹಸ್ತ ಕಾರ್ಯಕ್ರಮ ಬ್ಲಾಕ್‍ನಲ್ಲಿ ಯಶಸ್ವಿಯಾಗಿದೆ ಎಂದು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಹೇಳಿದರು.
ಬ್ಲಾಕ್‍ನಲ್ಲಿ 15 ಗ್ರಾಮಪಂಚಾಯಿತಿಗಳಿದ್ದು, ಈ ವ್ಯಾಪ್ತಿ 2500 ಮಂದಿಯನ್ನು ಪರೀಕ್ಷಿಸಿ ಸೂಕ್ತ ಸಲಹೆಗಳನ್ನು ನೀಡಲಾಗಿದೆ. ಪ್ರತಿ ಪಂಚಾಯಿತಿಯಲ್ಲಿ ಇಬ್ಬರು ಕರೊನಾ ಸೇನಾನಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೆ ಕೆಪಿಸಿಸಿ ವತಿಯಿಂದ 1 ಲಕ್ಷ ರೂ.ಗಳ ವಿಮೆ ಮಾಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈಗಾಗಲೇ ಸೋಮವಾರಪೇಟೆಯಲ್ಲಿ ಬಡವರಿಗೆ ಆರೋಗ್ಯ ತಪಾಸಣೆ ಹಾಗು ದಿನಬಳಕೆ ವಸ್ತುಗಳ ಕಿಟ್‍ಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಬೂತ್‍ಗಳಲ್ಲೂ ಆರೋಗ್ಯ ಹಸ್ತ ಕಾರ್ಯಕ್ರಮ ಮುಂದುವರಿಸಲಾಗುವುದು ಎಂದರು.
ಕಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪ ಧಾರಾಕಾರ ಮಳೆಯಿಂದ ರೈತರು ಹಾಗು ಕಾಫಿ ಬೆಳೆಗಾರರು ಫಸಲು ನಷ್ಟ ಅನುಭವಿಸಿ ಸಂಕಷ್ಟದಲ್ಲಿದ್ದಾರೆ. ತಾಲೂಕಿನ ಕಾಫಿ ಬೆಳೆಯುವ ಎಲ್ಲಾ ಹೋಬಳಿಗಳಲ್ಲಿ ಫಸಲು ಹಾನಿಯಾಗಿದೆ. ಈಗಾಗಲೇ ಸಾವಿರಾರು ಮಂದಿ ಪರಿಹಾರದ ಅರ್ಜಿ ಸಲ್ಲಿಸಿದ್ದಾರೆ. ಎಲ್ಲಾ ಬೆಳೆಗಾರರಿಗೆ ಕೂಡಲೆ ಪರಿಹಾರ ನೀಡಬೇಕು ಎಂದು ಸತೀಶ್ ಒತ್ತಾಯಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಹಾಗು ರಾಜ್ಯ ಸರ್ಕಾರ ಬಡವರು ಹಾಗು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕಚ್ಚಾ ತೈಲದ ಬೆಲೆ ಕಡಿಮೆಯಾಗಿ ದೇಶದಲ್ಲಿ 20 ರೂ.ಗಳಿಗೆ ಮಾರಬೇಕಾದ ಪೆಟ್ರೋಲ್ ಬೆಲೆಯನ್ನು 85 ರೂ.ಗಳಿಗೆ ಏರಿಸಲಾಗಿದೆ. ಗ್ಯಾಸ್ ಸಬ್ಸಿಡಿಯನ್ನು ತೆಗೆಯಲಾಗಿದೆ. ಅನ್ನಭಾಗ್ಯಯೋಜನೆಯಲ್ಲಿ 2ಕೆ.ಜಿ.ಅಕ್ಕಿಯನ್ನು ಕಡಿತಗೊಳಿಸಲಾಗಿದೆ. ಕರೊನಾ ಲಾಕ್‍ಡೌನ್‍ನಿಂದ ಯುವಕರು ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ದುರಾಡಳಿತದಿಂದ ದೇಶದ ಆರ್ಥಿಕತೆ ನೆಲಕಚ್ಚಿದೆ ಎಂಬ ಸತ್ಯ ಗ್ರಾಮೀಣ ಜನರಿಗೆ ತಿಳಿದಿದ್ದು, ಮುಂದಿನ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿ 40 ಗ್ರಾಮ ಪಂಚಾಯಿತಿಗಳನ್ನು ಕಾಂಗ್ರೆಸ್ ಹಿಡಿತಕ್ಕೆ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಕರೊನಾ ನಿಯಂತ್ರಣದಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲೂ ಹಣವನ್ನು ಕೊಳ್ಳೆ ಹೊಡೆದು ಸಿಕ್ಕಿಹಾಕಿಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅವಧಿ ಮುಗಿಸುವುದಿಲ್ಲ. ಮುನ್ನಾವೇ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅತ್ಯಧಿಕ ಸ್ಥಾನವನ್ನು ಪಡೆದು, ರಾಜ್ಯ ಆಡಳಿತ ಹಿಡಿಯಲಿದೆ ಎಂದು ವಕ್ಪ್ ಮಂಡಳಿಯ ಸಲಹಾ ಸಮಿತಿ ಜಿಲ್ಲಾಧ್ಯಕ್ಷ ಕೆ.ಎ.ಯಾಕೂಬ್ ಹೇಳಿದರು.
ಗೋಷ್ಠಿಯಲ್ಲಿ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ಡಿಸೋಜ, ಬ್ಲಾಕ್ ಕಾರ್ಯದರ್ಶಿ ಕೆ.ಜೆ.ಸುನಿಲ್, ಸಾಮಾಜಿಕ ಜಾಲತಾಣದ ಬ್ಲಾಕ್ ಅಧ್ಯಕ್ಷ ಮಂಜುನಾಥ್ ಇದ್ದರು.