ಅಮ್ಮ ಕೊಡವರಿಗೆ ಬೆಂಬಲ ನೀಡಲಿ : ಅಲ್ಲಾರಂಡ ವಿಠಲ್ ಒತ್ತಾಯ

September 11, 2020

ಮಡಿಕೇರಿ ಸೆ.11 : ’ಸಂಸ್ಕೃತಿ’ ಎನ್ನುವುದು ಹರಿಯುವ ನೀರಿದ್ದಂತೆ, ಅದರಂತೆ ಮೂಲದಲ್ಲಿ ಪ್ರಕೃತಿಯ ಆರಾಧಕರಾಗಿ ಪ್ರಸ್ತುತ ತಮ್ಮ ಸಂಸ್ಕೃತಿಯಲ್ಲಿ ಪೂಜಾ ಕಾರ್ಯಗಳನ್ನು ಮಿಳಿತಗೊಳಿಸಿಕೊಂಡವರು ಕಾವೇರಿಯ ದುರ್ಘಟನೆಯ ಬಳಿಕ ಸಂಸ್ಕೃತಿಯ ಉಳಿವಿನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಲ್ಲಾರಂಡ ರಂಗ ಚಾವಡಿಯ ಪ್ರಮುಖರಾದ ಅಲ್ಲಾರಂಡ ವಿಠಲ ನಂಜಪ್ಪ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಲಕಾವೇರಿ ಕ್ಷೇತ್ರದಲ್ಲಿ ಅಮ್ಮಕೊಡವರು ಮರಳಿ ಹಕ್ಕನ್ನು ಕೇಳತೊಡಗಿದ್ದಾರೆ. ಅರ್ಚಕ ವೃತ್ತಿ ನಡೆಸುತ್ತಿರುವವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕೊಡವ ಸಂಸ್ಕೃತಿ ಉಳಿಸಿ ಬೆಳೆಸಿ ಎಂದು ಹೇಳುವವರು ಇದೀಗ ಅಮ್ಮಕೊಡವರಿಗೆ ಬೆಂಬಲ ನೀಡಬೇಕು ಹಾಗೂ ತಲೆತಲಾಂತರದಿಂದ ಕಾಡನ್ನು ಉಳಿಸಿ ಬೆಳೆಸಿದ ಕಾಡಿನ ಮಕ್ಕಳಾದ ಕುರುಬ, ಜೇನುಕುರುಬ, ಎರವ, ಸೋಲಿಗ ಇತ್ಯಾದಿ ಜನಾಂಗದ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿ, ಬೆಳೆಸಲು ಅವಕಾಶ ಕಲ್ಪಿಸಲು ಮತ್ತೆ ಮತ್ತೆ ಧ್ವನಿ ಎತ್ತಬೇಕಾಗಿದೆ. ಕಾಡು ಅವರ ಪೂರ್ವಜರ ಬಳುವಳಿ ಹಕ್ಕು ಕೂಡ ಆಗಿದೆ ಎಂದು ಹೇಳಿದರು.
ತಲಕಾವೇರಿಯಲ್ಲಿ ನಡೆದ ದುರ್ಘಟನೆಯಲ್ಲಿ ಜಾತ್ಯತೀತ ನಿಲುವಿನ ನಾರಾಯಣಾಚಾರ್ ಸೇರಿದಂತೆ ಇತರರ ಸಾವು ನೋವಿನ ವಿಚಾರ. ಈ ಘಟನಾವಳಿಗಳ ಬಳಿಕ ಸ್ಥಳೀಯ ಸಂಸ್ಕೃತಿಯ ವಿಚಾರ ಬರುತ್ತಿದೆ. ಈ ಮೊದಲು ಇದರ ವಿಚಾರಗಳೇಕೆ ಪ್ರಸ್ತಾಪಕ್ಕೆ ಬರಲಿಲ್ಲವೆಂದು ಅಲ್ಲಾರಂಡ ವಿಠಲ ಪ್ರಶ್ನಿಸಿದರು.
ಕೊಡವರ ಮೂಲ ಸಂಸ್ಕೃತಿಯ ಪೂಜಾ ಕಾರ್ಯಗಳು ಇರಲಿಲ್ಲವಾದರು, ನಂತರದ ದಿನಗಳಲ್ಲಿ ಅದು ಸೇರ್ಪಡೆಗೊಂಡಿದೆ. ಮೂಲ ಕೊಡವ ಸಂಸ್ಕೃತಿಯ ಧಾರ್ಮಿಕ ಪೂಜೆಗಳು ಇರಲಿಲ್ಲ, ಗೃಹಪ್ರವೇಶದಂತಹ ಆಚರಣೆಯನ್ನು ‘ಮನೆ ಮಂಗಲ’ವೆಂದು ವಿಭಿನ್ನವಾಗಿ ಆಚರಿಸಲಾಗುತಿತ್ತು. ಪ್ರಕೃತಿಯ ಆರಾಧಕ ಕೊಡವ ಸಮುದಾಯದಲ್ಲಿ ಮಕ್ಕಳಿಗೆ ಹೆಸರಿಡಲು ಪಂಚಾಂಗದ ಅಗತ್ಯತೆ ಇದೆಯೇ ಎಂದು ಪ್ರಶ್ನಿಸಿದ ಅವರು, ಪಿಂಡ ಪ್ರದಾನದ ಆಚರಣೆಗಳು ಕೊಡವ ಸಂಸ್ಕೃತಿಯ ಇಲ್ಲವೆಂದು ಹೇಳಿದರು.
ಇದೀಗ ಅಮ್ಮ ಕೊಡವರು ತಲಕಾವೇರಿಯಲ್ಲಿ ಪೂಜಾ ಹಕ್ಕುದಾರಿಕೆಯ ಬೇಡಿಕೆ ಇಟ್ಟಿದ್ದಾರೆ, ಅದರ ಚರ್ಚೆಗಳು ನಡೆಯುತ್ತಿದೆ. ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಎನ್ನುವವರು ಅಮ್ಮ ಕೊಡವರನ್ನು ಬೆಂಬಲಿಸುವುದರೊಂದಿಗೆ, ಇಲ್ಲಿನ ಅರಣ್ಯ ಸಂಪತ್ತನ್ನು ಸಂರಕ್ಷಿಸಿದ ಜನಾಂಗಗಳ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮುಂದಾಗಬೇಕೆಂದು ತಿಳಿಸಿದರು.
ಅಮ್ಮ ಕೊಡವರು ತಲಕಾವೇರಿಯಲ್ಲಿ ಪೂಜೆಯ ಹಕ್ಕುದಾರಿಕೆಗೆ ಬೇಡಿಕೆ ಮಂಡಿಸಿದ್ದು, ಇದಕ್ಕೆ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಾ. ಮಹಾಬಲೇಶ್ವರ ಭಟ್ಟರು, ಇದು ಸರಿಯಾದ ಕ್ರಮವಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಅವರು ಹೇಳಿದಂತೆ 300 ವರ್ಷಗಳ ಹಿಂದೆ ಕುಲಧರ್ಮ, ಧರ್ಮ ಎರಡನ್ನೂ ತ್ಯಜಿಸಿ ತಲಕಾವೇರಿಯಲ್ಲಿ ಬ್ರಾಹ್ಮಣರಿಗೆ ಪೂಜೆ ಮಾಡಲು ಅಮ್ಮ ಕೊಡವರು ಅವಕಾಶ ಕಲ್ಪಿಸಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ವಿಚಾರವೆಂದು ವಿಠಲ ಸ್ಪಷ್ಟಪಡಿಸಿದರು.
ಹಾಲೇರಿ ರಾಜರೊಬ್ಬರ ಕಾಲದಲ್ಲಿ ಸಮಯ ಸಂದರ್ಭಕ್ಕೆ ಸರಿಯಾಗಿ ತೀರ್ಥ ಪ್ರಸಾದ ತಲುಪಿಸಲು ವಿಳಂಬವಾದ ಕಾರಣದಿಂದ ಅಮ್ಮ ಕೊಡವರ ಹಕ್ಕಿನ ಪೂಜಾ ವೃತ್ತಿಯನ್ನು ವಜಾಗೊಳಿಸಿ ಆ ಸ್ಥಾನಕ್ಕೆ ಬ್ರಾಹ್ಮಣರನ್ನು ನೇಮಿಸಿದ ಬಗ್ಗೆ ಮಾಹಿತಿ ಇದೆ ಎಂದು ಅವರು ತಿಳಿಸಿದರು.
::: ಆರಕ್ಷಕರ ಬಗ್ಗೆ ಅಸಮಾಧಾನ :::
ಇತ್ತೀಚೆಗೆ ಶಿವಮೊಗ್ಗದಲ್ಲಿ ಸಾಮಾಜಿಕ ಹೋರಾಟಗಾರ ಕೆ.ಎಲ್.ಅಶೋಕ್ ಅವರು ತಮ್ಮ ವಾಹನವನ್ನು ನಿಗದಿತ ಸ್ಥಳದಲ್ಲಿ ನಿಲುಗಡೆ ಮಾಡಿಲ್ಲವೆಂದು ಪೊಲೀಸರು ಅವರ ವಿರುದ್ಧ ಬಳಸಿರುವ ಭಾಷೆ ಯೋಗ್ಯ ರೀತಿಯದ್ದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಜನರೊಂದಿಗೆ ವ್ಯವಹರಿಸುವ ಸಂದರ್ಭ ಬಳಸುವ ಭಾಷೆ ಯೋಗ್ಯವಾಗಿರಬೇಕೆಂದು ಅಲ್ಲಾರಂಡ ವಿಠಲ ಆಗ್ರಹಿಸಿದರು.

error: Content is protected !!