ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ : ಹುತಾತ್ಮರ ಸ್ಮಾರಕಕ್ಕೆ ಗೌರವ ಸಮರ್ಪಣೆ

11/09/2020

ಮಡಿಕೇರಿ ಸೆ.11 : ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯ ನಗರದ ಅರಣ್ಯ ಭವನದಲ್ಲಿ ಶುಕ್ರವಾರ ನಡೆಯಿತು.ನಾಡಿನ ಅರಣ್ಯ ಮತ್ತು ವನ್ಯ ಜೀವಿ ಸಂಪತ್ತು ಸಂರಕ್ಷಿಸುವ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿದ ಅರಣ್ಯ ಇಲಾಖೆಯ ಹುತಾತ್ಮರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಏರ್ ಮಾರ್ಷಲ್ (ನಿವೃತ್ತ) ಕೆ.ಸಿ.ಕಾರ್ಯಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್, ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ.ಚಕ್ರಪಾಣಿ. ಮಡಿಕೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿ ದಳದ ಸಿ.ಜಿ.ಕಾರ್ಯಪ್ಪ, ಸೋಮವಾರಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು, ಮಡಿಕೇರಿ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎಸ್.ದಯಾನಂದ, ಮಡಿಕೇರಿ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿಂಧೆ ನೀಲೇಶ್, ಶ್ರೀಪತಿ ಇತರರು ಅರಣ್ಯ ಹುತಾತ್ಮ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ಗೌರವ ಸಲ್ಲಿಸಿದರು.
ಏರ್ ಮಾರ್ಷಲ್ (ನಿವೃತ್ತ) ಕೆ.ಸಿ.ಕಾರ್ಯಪ್ಪ ಅವರು ಮಾತನಾಡಿ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವುದು ಸವಾಲಿನ ಕೆಲಸವಾಗಿದೆ. ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಠಿಣ ಪರಿಸ್ಥಿತಿಯಲ್ಲಿಯೂ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಾರೆ ಎಂದರು.
ಅರಣ್ಯ ಅಥವಾ ವನ್ಯ ಸಂಪತ್ತು ಇದಲ್ಲಿ ಮಾತ್ರ ಪ್ರಕೃತಿಯಲ್ಲಿ ಸಮತೋಲನ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಎಲ್ಲಾ ಹಂತದ ಸಿಬ್ಬಂದಿಗಳು ಸಾಕಷ್ಟು ಶ್ರಮ ವಹಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಕೆ.ಸಿ.ಕಾರ್ಯಪ್ಪ ಅವರು ನುಡಿದರು.
ಕೋವಿಡ್-19 ಈಗ ವ್ಯಾಪಕವಾಗಿ ಹರಡುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೂಡ ಆರೋಗ್ಯದ ಕಡೆ ಹೆಚ್ಚು ಮುತವರ್ಜಿ ವಹಿಸುವುದು ಅಗತ್ಯವಾಗಿದೆ ಎಂದರು.
ಅರಣ್ಯ ಹುತಾತ್ಮರ ದಿನಾಚರಣೆಯ ಪಕ್ಷಿನೋಟ ಮತ್ತು ಅರಣ್ಯ ಹುತಾತ್ಮರ ಸ್ಮರಣೆಯನ್ನು ವಲಯ ಅರಣ್ಯಾಧಿಕಾರಿ ಕ್ಷಮಾ ಅವರು ಓದಿದರು.
ಕಾಡುಗಳ್ಳ, ದಂತಚೋರ ವೀರಪ್ಪನ್‍ನಿಂದ ಹುತಾತ್ಮರಾದ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀನಿವಾಸ್ ಅವರ ಕಾರ್ಯವೈಖರಿ, ದಕ್ಷತೆ ಹಾಗೂ ಅವರ ಧ್ಯೆಯೆ ‘ಕಾಡಿಗಾಗಿ ಜನನ, ಕಾಡಿಗಾಗಿ ಜೀವನ ಮತ್ತು ಕಾಡಿಗಾಗಿ ಮರಣ’ ಎಂಬ ವಾಕ್ಯವನ್ನು ಕ್ಷಮಾ ಅವರು ಓದಿದರು.

ಈ ಸಂಧರ್ಭದಲ್ಲಿ ಅರಣ್ಯ ಇಲಾಖೆಯಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ದುಡಿದು ಹುತಾತ್ಮರಾದ ಅರಣ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗವನ್ನು ಸ್ಮರಣೆ ಮಾಡಲಾಯಿತು.
ಪೊಲೀಸ್ ಇಲಾಖೆಯ ಸಿದ್ದೇಶ್ ಮತ್ತು ತಂಡದವರು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡು ಗೌರವ ಸಲ್ಲಿಸಿದರು. ವಲಯ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ರ ಅವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.