ಶ್ರೇಷ್ಠ ಪುಸ್ತಕ ಪ್ರಶಸ್ತಿ ಪ್ರಕಟ

ಮಡಿಕೇರಿ ಸೆ.11 : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಆಕಾಡೆಮಿಯು 2018-19ನೇ ಸಾಲಿನ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ವಿಜ್ಞಾನ, ತಂತ್ರಜ್ಞಾನ,ಕೃಷಿ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ, ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಈ ಪೈಕಿ ಅಕಾಡಮಿಗೆ ಸಲ್ಲಿಕೆಯಾದ ಪುಸ್ತಕಗಳನ್ನು ತಜ್ಞರಿಂದ ಮೌಲ್ಯಮಾಪನ ಮಾಡಿಸಿ 2018-19ನೇ ಸಾಲಿನ ಪ್ರಶಸ್ತಿಗೆ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ವಿಜೇತ ಲೇಖಕರು ಮತ್ತು ಪುಸ್ತಕಗಳ ವಿವರಗಳು ಇಂತಿವೆ.
ವಿಜ್ಞಾನ ಕ್ಷೇತ್ರದಲ್ಲಿ ಲೇಖಕ ಡಾ.ಟಿ.ಎಸ್.ಚನ್ನೇಶ್ ಅವರು ಬರೆದಿರುವ ಅನುರಣನ ವಿಜ್ಞಾನ ಪ್ರಬಂಧಗಳು ಪುಸ್ತಕ, ತಂತ್ರಜ್ಞಾನ ಕ್ಷೇತ್ರದಲ್ಲಿ ಲೇಖಕ ಡಾ.ಉದಯ್ ಶಂಕರ ಪುರಾಣಿಕ ಅವರು ಬರೆದಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-ಹೊಸ ತಂತ್ರಜ್ಞಾನ ಹೊಸ ಅವಕಾಶಗಳು ಹಾಗೂ ಲೇಖಕ ಪ್ರೊ.ಮಹದೇವಯ್ಯ ಅವರ ವೃತ್ತಿಪರ ಕಂಪ್ಯೂಟರ್ ಸಾಕ್ಷರತೆ ಪುಸ್ತಕಕ್ಕೆ ಪ್ರಶಸ್ತಿ ದೊರೆತಿದೆ.
ಜೊತೆಗೆ ಕೃಷಿ ಕ್ಷೇತ್ರದಲ್ಲಿ ಲೇಖಕಿ ತ್ರಿವೇಣಿ.ಸಿ ಅವರು ಬರೆದಿರುವ ಮಣ್ಣು-ಉಸಿರಾಡುವ ವಸ್ತು ಪುಸ್ತಕ, ವೈದ್ಯಕೀಯ ಕ್ಷೇತ್ರದಲ್ಲಿ ಲೇಖಕ ಡಾ.ರಣಜಿತ್ ಬೀರಣ್ಣ ನಾಯಕ ಅವರು ಬರೆದಿರುವ ವೈದ್ಯ-ವಿಜ್ಞಾನ ಪುಸ್ತಕ ಮತ್ತು ಡಾ.ಮುರಲೀಮೋಹನ್ ಚೂಂತಾರು ಅವರು ಬರೆದಿರುವ ಸಂಜೀವಿನಿ ಭಾಗ 2- ಆರೋಗ್ಯ ಮಾರ್ಗದರ್ಶಿ ಪುಸ್ತಕಕ್ಕೆ ಶ್ರೇಷ್ಠ ಪುಸ್ತಕ ಪ್ರಶಸ್ತಿ ಲಭಿಸಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿಯ ಎ.ಎಂ ರಮೇಶ್ ಅವರು ತಿಳಿಸಿದ್ದಾರೆ.
