ಪ್ರಾಣಿ ದಯಾ ಸಂಘ ರಚನೆ : ಸಂಘ, ಸಂಸ್ಥೆಗಳೊಂದಿಗೆ ಸಮಾಲೋಚನೆ

12/09/2020

ಮಡಿಕೇರಿ ಸೆ.11 : ಜಿಲ್ಲೆಯಲ್ಲಿ ಪ್ರಾಣಿ ದಯಾ ಸಂಘದ ಅಧಿಕಾರಿಗಳ ಕಾರ್ಯಕಾರಿ ಸಮಿತಿ ರಚನೆ ಸಂಬಂಧ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಾಣಿ ದಯಾ ಸಂಘ ರಚನೆ, ಮತ್ತು ನೋಂದಣಿ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು.
ಪಶುಪಾಲನಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಡಾ.ತಮ್ಮಯ್ಯ ಅವರು ಮಾತನಾಡಿ ಜಿಲ್ಲೆಯಲ್ಲಿ ಪ್ರಾಣಿ ದಯಾ ಸಂಘದ ಅಧಿಕಾರಿಗಳ ಸಮಿತಿ ರಚನೆ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಸೂಚಿಸಿರುವ ಮಾರ್ಗಸೂಚಿಯಂತೆ ಇಲಾಖೆಯ ಅಧಿಕಾರಿಗಳ ಜೊತೆಗೆ ಗೋಶಾಲೆ ನಡೆಸುವ ಇಬ್ಬರು ಮತ್ತು ಇಬ್ಬರು ಸಾರ್ವಜನಿಕರನ್ನು ಸೇರ್ಪಡೆ ಮಾಡಬೇಕಿದೆ. ಹಾಗೆಯೇ ಗೋಶಾಲೆಯನ್ನು ನೋಂದಾಯಿಸಿರಬೇಕು ಎಂದು ಅವರು ತಿಳಿಸಿದರು.
ಗೋಶಾಲೆಯ ಪ್ರತಿನಿಧಿಗಳು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಬೀಡಾಡಿ ಜಾನುವಾರುಗಳ ಸಂಖ್ಯೆ ಹೆಚ್ಚಿದ್ದು, ಈ ಬೀಡಾಡಿ ಜಾನುವಾರಗಳನ್ನು ಸಂರಕ್ಷಿಸಬೇಕಿದೆ. ನಗರ ಮತ್ತು ಪಟ್ಟಣ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತಿಂದು ಜಾನುವಾರುಗಳ ಆರೋಗ್ಯಕ್ಕೆ ಹಾನಿಯಾಗುತ್ತಿದೆ ಎಂದು ಅವರು ಗಮನ ಸೆಳೆದರು.
ಜಿಲ್ಲೆಯ ಹಲವು ಕಡೆಗಳಲ್ಲಿ ಸರ್ಕಾರಿ ಗೋಮಾಳ ಅತಿಕ್ರಮವಾಗಿದ್ದು, ಇದರಿಂದ ಬೀಡಾಡಿ ದನಗಳಿಗೆ ತೊಂದರೆಯಾಗುತ್ತಿದೆ. ಗೋವುಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಮತ್ತೊಬ್ಬರು ಕೋರಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಸುರೇಶ್ ಭಟ್, ಹಿರಿಯ ಸಹಾಯ ನಿರ್ದೇಶಕರಾದ ಡಾ.ತಮ್ಮಯ್ಯ, ಸಹಾಯಕ ನಿರ್ದೇಶಕರಾದ ಡಾ.ಚಿದಾನಂದ, ಡಾ.ಬೊಳ್ಕ, ನಗರಸಭೆ ಪೌರಾಯುಕ್ತರಾದ ರಾಮದಾಸ್, ಗೋಶಾಲೆ ಪ್ರತಿನಿಧಿಗಳಾದ ಡಾ.ವೈ.ಪಿ ಕೃಷ್ಣಮೂರ್ತಿ, ವಿ.ವನಮೂಲ ಭಟ್, ಕೆ.ಕೆ ಶ್ಯಾಂ, ರಾಘವೇಂದ್ರ ಭಟ್, ಹರೀಶ್ ಆಚಾರ್ಯ ಇತರರು ಹಲವು ಮಾಹಿತಿ ನೀಡಿದರು.