ಯರವರನ್ನು ಪ್ರಾಚೀನ ಆದಿವಾಸಿಗಳೆಂದು ಘೋಷಣೆ ಮಾಡಲು ಒತ್ತಾಯ

12/09/2020

ಮಡಿಕೇರಿ ಸೆ.12 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಯರವ ಯುವ ಒಕ್ಕೂಟದ ಪ್ರಮುಖರು ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವೈ.ಬಿ.ಗಣೇಶ್, ಕೊಡಗು ಜಿಲ್ಲೆಯ ಬುಡಕಟ್ಟು ವರ್ಗದ ಯರವ ಸಮುದಾಯವನ್ನು ಪ್ರಾಚೀನ ಆದಿವಾಸಿಗಳೆಂದು ಘೋಷಣೆ ಮಾಡಬೇಕು, ಕಂದಾಯ ಇಲಾಖೆಯಲ್ಲಿ ನಡೆಯುವ ಉದ್ಯೋಗ ನೇಮಕಾತಿ ಸಂದರ್ಭ ಮೆರಿಟ್‍ನಿಂದ ‘ಯರವ’ ಸಮುದಾಯಕ್ಕೆ ಪ್ರತ್ಯೇಕ ನೇಮಕಾತಿಗೆ ಆದೇಶ ಜಾರಿಗೊಳಿಸಬೇಕು, ಯವರ ಸಮುದಾಯದ ಪ್ರತಿ ಕುಟುಂಬಕ್ಕೆ 5 ಎಕರೆ ಜಮೀನು ನೀಡಬೇಕು, ಯುವಕ, ಯುವತಿಯರಿಗೆ ವಿಶೇಷ ಉದ್ಯೋಗ ನೇಮಕಾತಿಯಡಿ ಆದ್ಯತೆ ನೀಡಬೇಕು ಮತ್ತು ಪರಿಶಿಷ್ಟ ವರ್ಗಗಳ ಕಾರ್ಯಾಲಯದಲ್ಲಿ ಯರವ ಯುವಕರಿಗೆ ನೌಕರಿ ನೀಡಬೇಕೆಂದು ಒತ್ತಾಯಿಸಿದರು.
ಭೂಮಾಲೀಕರ ತೋಟಗಳಲ್ಲಿ ಹಲವಾರು ವರ್ಷಗಳಿಂದ ಲೈನ್‍ಮನೆಯಲ್ಲಿ ನೆಲೆಸಿರುವವರಿಗೆ ಪುನರ್‍ವಸತಿ ಕಲ್ಪಿಸಬೇಕು, ಪ್ರತಿ ಕುಟುಂಬಕ್ಕೆ ಪರಿಶಿಷ್ಟ ವರ್ಗಗಳ ಕಲ್ಯಾಣ ನಿಧಿಯಿಂದ ತಲಾ 5 ಸಾವಿರ ಹಣ ಪಾವತಿಸಬೇಕು, ಸರ್ಕಾರ ನಿರ್ಮಿಸಿದ ಸಾಲು ಮನೆಗಳಲ್ಲಿ ನೆಲೆಸಿರುವ ಯರವ ಕುಟುಂಬಕ್ಕೆ ವಿದ್ಯುತ್ ನೀಡಬೇಕು, ಕಳೆದ 5, 6 ತಿಂಗಳಿನಿಂದ ನೀಡದೆ ಇರುವ ಪಿಂಚಣಿ ಹಣವನ್ನು ಶೀಘ್ರವಾಗಿ ನೀಡಬೇಕು, ಪ್ರತ್ಯೇಕ ಪರಿಶಿಷ್ಟ ವರ್ಗಗಳ ಸಚಿವಾಯವನ್ನು ಶಾಸಕ ಸಭೆಯಲ್ಲಿ ಅನುಮೋದಿಸಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಹಣಕಾಸು ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪ್ರತಿ ತಾಲ್ಲೂಕು ಪರಿಶಿಷ್ಟ ವರ್ಗಗಳ ಸಹಾಯಕ ನಿರ್ದೇಶಕರ ಖಾತೆಗೆ 5 ಕೋಟಿ ಅನುದಾನವನ್ನು ನೀಡಿ ಭೂ ರಹಿತ ಪ. ವರ್ಗದ ಕುಟುಂಬಕ್ಕೆ ಜಮೀನು ಖರೀದಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಪೊಸ್ಕೊ ಕಾಯ್ದೆಯಲ್ಲಿ ಬಂಧಿಸಿರುವ ಯುವಕ ಯುವತಿಯರ ಕುಷಲೊಪರಿಯನ್ನು ವಿಚಾರಿಸಲು ನ್ಯಾಯಾಲಯ ವಿಶೇಷ ಸಮಿತಿ ರಚನೆ ಮಾಡಬೇಕು, ದೇವರಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವೆ ನಡೆಸಿ ಒತ್ತುವಾರಿಯಾದ ಜಾಗ ಮತ್ತು ಉಳಿದ ಜಾಗದಲ್ಲಿ ತಲತಲಾರದಿಂದ ನೆಲೆಸಿರುವ ಬುಡಕಟ್ಟು ಸಮುದಾಯಗಳಿಗೆ ಮೂಲಭೂತ ಸೌಕರ್ಯ ನೀಡಬೇಕು, ನಿರುದ್ಯೋಗಿ ಯುವಕರಿಗೆ ಪ್ರವಾಸೋದ್ಯಮ ಹಾಗೂ ವಾಲ್ಮೀಕಿ ನಿಗಮದಿಂದ ನೀಡಿರುವ ಆಟೋ ಹಾಗೂ ಕಾರುಗಳಿಗೆ ರಸ್ತೆ ವಿನಾಯಿತಿ ನೀಡಬೇಕು ಹಾಗೂ ಮೂರು ಚಕ್ರದ ವಾಹನಕ್ಕೆ ಆಯಾ ಪೊಲೀಸ್ ಠಾಣೆ ವ್ಯಾಪ್ತಿಗೆ ಮಾತ್ರ ಪರಿಮಿತಿ ಇದ್ದು, ಅದನ್ನು ಜಿಲ್ಲಾ ವ್ಯಾಪ್ತಿಗೆ ವಿಸ್ತರಿಸುವಂತೆ ಪ್ರಮುಖರು ಮನವಿ ಮಾಡಿದರು.
ಎಲ್ಲಾ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಬೇಡಿಕೆಗಳ ಬಗ್ಗೆ ಗಮನ ಸೆಳೆಯಲಾಗಿದೆ ಎಂದು ಒಕ್ಕೂಟದ ಗೌರವಾಧ್ಯಕ್ಷ ಪಿ.ಎಸ್.ಮುತ್ತ ತಿಳಿಸಿದರು.
ಕಾರ್ಯದರ್ಶಿ ವೈ.ಎಂ. ಸಿದ್ದು, ಸದಸ್ಯರುಗಾಳದ ಪಿ.ಕೆ. ಮಣಿ ಕುಂಞ್ಞ, ಪಿ.ಬಿ. ರಾಜು, ಪಿ.ಸಿ. ಸುರೇಶ, ವೈ.ಟಿ. ಶಂಕ್ರು, ವೈ.ಬಿ. ಗಣೇಶ್, ಪಿ.ಜೆ. ಸುಬ್ರಮಣಿ, ಪಿ.ಎಂ.ರಾಮು ಹಾಜರಿದ್ದರು.