ಡ್ರಗ್ಸ್ ಮಾಫಿಯಾದಲ್ಲಿರುವ ಪ್ರಭಾವಿಗಳ ಹೆಸರು ಬಹಿರಂಗ ಪಡಿಸಿ : ಸಲೀಂ ಅಹಮ್ಮದ್ ಒತ್ತಾಯ

12/09/2020

ಮಡಿಕೇರಿ ಸೆ.12 : ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದ್ದು, ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಲೆಕ್ಕವನ್ನೇ ನೀಡದ ಸರ್ಕಾರ ಇದೀಗ ಡ್ರಗ್ಸ್ ವಿಚಾರಕ್ಕೆ ಆದ್ಯತೆ ನೀಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಟೀಕಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜನಧ್ವನಿ ಹೋರಾಟದ ಮೂಲಕ ಕಾಂಗ್ರೆಸ್ ಪಕ್ಷ ಕೋವಿಡ್ ಲೆಕ್ಕ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿತ್ತು, ಆದರೆ ಲೆಕ್ಕ ನೀಡದೆ ನುಣಿಚಿಕೊಂಡಿತು ಎಂದರು.
ಡ್ರಗ್ಸ್ ಮಾಫಿಯಾದಲ್ಲಿ ಯಾರೆಲ್ಲಾ ಪ್ರಭಾವಿಗಳಿದ್ದಾರೆ ಎಂಬುವುದನ್ನು ಸರ್ಕಾರ ಬಹಿರಂಗಪಡಿಸಬೇಕು. ಯಾರು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನುವುದನ್ನು ಕೂಡ ತಿಳಿಸಬೇಕು. ಡ್ರಗ್ಸ್ ದಂಧೆಗೆ ತಕ್ಷಣ ಕಡಿವಾಣ ಹಾಕಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು, ದಂಧೆಕೋರರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಪೊಲೀಸರಿಗೆ ಡ್ರಗ್ಸ್ ದಂಧೆಯ ವಿಚಾರ ಮೊದಲೇ ತಿಳಿದಿತ್ತು, ಹೀಗಿದ್ದರೂ ಕಾರ್ಯಪ್ರವೃತ್ತವಾಗುವಲ್ಲಿ ಸರ್ಕಾರ ಎಡವಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಅವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಶಾಸಕ ರವಿಕುಮಾರ್ ಆರೋಪಿಸಿದ್ದು, ಮೊದಲು ಅವರು ಪೊಲೀಸರಂತೆ ಮಾತನಾಡುವುದು ನಿಲ್ಲಿಸಲಿ. ಯಾರೇ ತಪ್ಪು ಮಾಡಿದರೂ ಸೂಕ್ತ ತನಿಖೆಯ ಮೂಲಕ ಸತ್ಯ ಬೆಳಕಿಗೆ ಬರಲಿದೆ ಎಂದು ಸಲೀಂ ಹೇಳಿದರು.
ಈ ಹಿಂದೆ ಏನಾಗಿತ್ತು ಎನ್ನುವುದಕ್ಕಿಂತ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವೇ ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕಲಿ. ಕಾಂಗ್ರೆಸ್ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.
ಸರ್ಕಾರ ಬಿಜೆಪಿಯ ಪ್ರಚಾರಕಿಯಾಗಿದ್ದ ರಾಗಿಣಿ ರಕ್ಷಣೆಗೆ ನಿಂತಿದೆಯೇ ಎನ್ನುವ ಸಂಶಯ ಮೂಡುತ್ತಿದೆ, ಹಾಗಿಲ್ಲವಾದರೆ ಸರ್ಕಾರದಲ್ಲಿರುವವರೇ ನಮ್ಮ ಮೇಲೆ ಒತ್ತಡ ಇದೆ ಎಂದು ಹೇಳುತ್ತಿರುವುದೇಕೇ ಎಂದು ಪ್ರಶ್ನಿಸಿದರು.
ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವ ಸಂದರ್ಭ ಸಮನ್ವಯ ಸಾಧಿಸುವಲ್ಲಿ ಸಚಿವರುಗಳು ವಿಫಲರಾಗಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ದೊರಕುತ್ತಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆಯೂ ಹದಗೆಟ್ಟಿದೆ. ಡಿಜೆ. ಹಳ್ಳಿ ಗಲಭೆ ಮತ್ತು ಡ್ರಗ್ಸ್ ವಿಚಾರದಲ್ಲಿ ಸರ್ಕಾರ ಎಡವಿದೆ ಎಂದು ಟೀಕಿಸಿದರು.
ಭೂಕಾಯ್ದೆ ತಿದ್ದುಪಡಿ ವಿರುದ್ಧ ಪಂಚಾಯಿತಿ ಮಟ್ಟದಲ್ಲಿ ಜನಜಾಗೃತಿ ಮೂಡಿಸಲಾಗುವುದು. ಅಧಿವೇಶನದಲ್ಲಿ ಸರ್ಕಾರದ ಎಲ್ಲಾ ವೈಫಲ್ಯಗಳ ವಿರುದ್ಧ ಚರ್ಚಿಸಲಾಗುವುದು ಎಂದರು.
ರಾಜ್ಯ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದರೂ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರ ತರುವಲ್ಲಿ ರಾಜ್ಯ ವಿಫಲವಾಗಿದೆ. ಪ್ರಧಾನಿಯನ್ನು ಭೇಟಿಯಾಗಿ ಚರ್ಚಿಸಲು ಕೂಡ ಸಚಿವರುಗಳಿಗೆ ಸಾಧ್ಯವಾಗುತ್ತಿಲ್ಲ. ಕರ್ನಾಟಕಕ್ಕೆ ಹೆಚ್ಚಿನ ಅನುದಾನ ದೊರಕಿಸುವಲ್ಲಿ ರಾಜ್ಯದ ಸಂಸದರು, ಸಚಿವರು ಪ್ರಯತ್ನಿಸಬೇಕು ಎಂದು ಸಲೀಂ ಒತ್ತಾಯಿಸಿದರು.
ರಾಜ್ಯದ ಪ್ರತಿಯೊಂದು ಬೂತ್ ನಲ್ಲಿಯೂ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಕಾಂಗ್ರೆಸ್ ಆಯೋಜಿಸಿದೆ. ಅಧಿಕಾರದಲ್ಲಿ ಇಲ್ಲದಿದ್ದರೂ ಕಾಂಗ್ರೆಸ್ ನಿಂದ ಜನಸೇವೆ ಮುಂದುವರೆದಿದೆ. ಅಧಿಕಾರದಲ್ಲಿರುವ ಪಕ್ಷ ಮಾಡಬೇಕಾದ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ, ಪಕ್ಷದ ಪ್ರಮುಖರಾದ ಚಂದ್ರಮೌಳಿ, ಎ.ಎಸ್.ಪೊನ್ನಣ್ಣ, ಹರೀಶ್ ಬೋಪಣ್ಣ ಹಾಗೂ ಕೆಪಿಸಿಸಿ ಮುಖಂಡರು ಹಾಜರಿದ್ದರು.