ನಟಿಯರು 3 ದಿನ ಪೊಲೀಸರ ಕಸ್ಟಡಿಗೆ
12/09/2020

ಬೆಂಗಳೂರು ಸೆ.12 : ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನವಾಗಿರುವ ನಟಿ ಸಂಜನಾ, ರಾಗಿಣಿ, ರವಿಶಂಕರ್, ಲೂಮ್ ಪೆಪ್ಪರ್, ಪ್ರಶಾಂತ್ ರಂಕಾ, ರಾಹುಲ್ ಅವರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ನ್ಯಾಯಾಲಯ ನೀಡಿದೆ. ಸೋಮವಾರದವರೆಗೂ ನಟಿ ರಾಗಿಣಿ, ಸಂಜನಾ ಸೇರಿದಂತೆ 6 ಮಂದಿ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲೇ ಉಳಿಯಲ್ಲಿದ್ದಾರೆ.
ಇಂದು ನಟಿ ರಾಗಿಣಿ ಮತ್ತು ಸಂಜನಾ ಅವರನ್ನು ಸಿಸಿಬಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ಕೋರ್ಟ್ ಜಡ್ಜ್ ಮುಂದೆ ಹಾಜರ್ ಪಡಿಸಿದ್ದರು. ಈ ವೇಳೆ ವಿಚಾರಣೆಯನ್ನು ಮುಂದುವರಿಸಲು ಮತ್ತೆ 6 ದಿನ ಪೊಲೀಸ್ ಕಸ್ಟಡಿಗೆ ನೀಡಲು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಲ್ಲದೇ ಪ್ರಕರಣದಲ್ಲಿ ಇದುವರೆಗೂ ಆಗಿರುವ ತನಿಖೆಯ ಮಾಹಿತಿಯನ್ನು ಕೋರ್ಟಿಗೆ ಸಲ್ಲಿಸಿದ್ದರು.
