ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಫಿಟ್ ಇಂಡಿಯಾ ಅಭಿಯಾನ

12/09/2020

ಮಡಿಕೇರಿ ಸೆ. 12 : ಪ್ರತೀ ವ್ಯಕ್ತಿ, ಕುಟುಂಬ ಪ್ರತೀದಿನ ವ್ಯಾಯಾಮ ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವುದರೊಂದಿಗೆ ಸದೃಢವಾದ ನವ ಭಾರತ ನಿರ್ಮಾಣಕ್ಕೆ ಬದ್ಧವಾಗಬೇಕಿದೆ ಎಂದು ಭಾರತೀಯ ವಾಯುದಳದ ನಿವೃತ್ತ ತಂತ್ರಜ್ಞ ಕುಕ್ಕೇರ ಜಯ ಚಿಣ್ಣಪ್ಪ ಅವರು ಕರೆ ನೀಡಿದರು.
ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಅಭಿಯಾನದ ಭಾಗವಾಗಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಎನ್‍ಸಿಸಿ ಘಟಕ ಹಾಗೂ 19ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ಸಹಯೋಗದಲ್ಲಿ ಶುಕ್ರವಾರ ನಡೆದ ವೆಬಿನಾರಿನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಶೇಕಡಾ 30 ರಷ್ಟು ಜನರು ಸ್ಥೂಲಕಾಯದ ಸಮಸ್ಯೆ ಎದುರಿಸುತ್ತಿದ್ದು, ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಮಾನಸಿಕ ಆರೋಗ್ಯ ಹೆಚ್ಚಿಸಿಕೊಳ್ಳಲು ಅನುವುಮಾಡಿಕೊಡುತ್ತದೆ ಎಂದು ವಿವರಿಸಿದರು.
ಮಹಾತ್ಮ ಗಾಂಧಿಯವರು ದೇಶಕ್ಕೆ ಸ್ವಾತಂತ್ರ್ಯವನ್ನು ಮಾತ್ರ ತಂದುಕೊಟ್ಟಿದ್ದಲ್ಲ, ಬದಲಾಗಿ, ಸ್ವಚ್ಛ ಭಾರತ, ಸದೃಢ ಭಾರತದ ಕನಸನ್ನೂ ಕಂಡಿದ್ದರು ಎಂದು ಮನನ ಮಾಡಿದ ಅವರು, ಮಹಾತ್ಮ ಗಾಂಧಿಯವರ ಕನಸನ್ನು ನನಸು ಮಾಡಲು ಎಲ್ಲರೂ ಪಣತೊಡಬೇಕಿದೆ ಎಂದು ತಿಳಿಸಿದರು.
ಇದೇ ವೇಳೆ, ಮಹಾತ್ಮ ಗಾಂಧೀಜಿಯವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಪಣತೊಟ್ಟಿದ್ದು, ಇಂದಿನ ಯುವ ಜನಾಂಗ ಮಾದರಿ ವ್ಯಕ್ತಿಯನ್ನಾಗಿ ಪರಿಗಣಿಸಿ ಸದಾ ಚಟುವಟಿಕೆಯಿಂದ ಇರಬೇಕಾಗಿದೆ ಎಂದು ಕರೆ ನೀಡಿದರು.
ಈ ಹಿಂದಿನ ಕಾಲದಲ್ಲಾದರೆ ಜನರು ಸುಮಾರು ಏಳೆಂಟು ಕಿ.ಮೀ ಕಾಲ್ನಡಿಗೆಯಲ್ಲೇ ಕ್ರಮಿಸಿ ಜೀವನ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಆರೋಗ್ಯವೂ ಉತ್ತಮವಾಗಿತ್ತು. ಆದರೀಗ ಆಧುನಿಕ ಜೀವನ ಶೈಲಿಯಿಂದಾಗಿ ಜೀವನ ಮಟ್ಟ ಸುಧಾರಿಸಿದೆಯಾದರೂ ಆರೋಗ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಭಿನಂದನಾ ಮಾತುಗಳನ್ನಾಡಿದ 19ನೇ ಕರ್ನಾಟಕಾ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್, ಕರ್ನಲ್ ಚೇತನ್ ಧಿಮನ್, ವಿದ್ಯಾರ್ಥಿಗಳು ಗರಿಷ್ಠ ಒಂದು ಗಂಟೆಗಿಂತ ಹೆಚ್ಚಾಗಿ ಮೊಬೈಲ್ ಫೋನನ್ನು ಬಳಸಬಾರದು. ಹೆಚ್ಚಾಗಿ ಮೊಬೈಲ್ ಫೋನ್ ಬಳಸುವುದರಿಂದ ಬೆರಳಿಗೆ ಸಿಗಬೇಕಾದ ವ್ಯಾಯಾಮ ಸರಿಯಾಗಿ ಸಿಗದಾಗುತ್ತದೆಯಲ್ಲದೆ, ಬೇರೆ ಬೇರೆ ರೀತಿಯ ಸ್ನಾಯು ಸೆಳೆತದಂತಹಾ ಕಾಯಿಲೆಗಳಿಗೂ ಕಾರಣವಾಗುತ್ತದೆ ಎಂದು ಎಚ್ಚರಿಸಿದ ಅವರು, ಇದೀಗ ಕೋವಿಡ್ 19ರ ಸಂಕಷ್ಟದಲ್ಲಿ ಆನ್ಲೈನ್ ತರಗತಿಗಳು ನಡೆಯುತ್ತಿರುವುದರಿಂದ ಅತಿಯಾದ ಮೊಬೈಲ್ ಬಳಕೆ ಅನಿವಾರ್ಯವಾಗಿದೆಯಾದರೂ, ಆದಷ್ಟು ನಿಯಂತ್ರಣದಲ್ಲಿಡಬೇಕು ಎಂದು ಸಲಹೆ ನೀಡಿದರು.
ಅಲ್ಲದೆ, ವ್ಯಾಯಾಮ ಮಾಡುವಾಗ, ವಾಯುವಿಹಾರ ಮಾಡುವಾಗ ಇಯರ್ ಫೋನ್ ಮುಖಾಂತರ ಸಂಗೀತ ಆಲಿಸುವುದು ಅಷ್ಟೊಂದು ಆರೋಗ್ಯಕರ ಕ್ರಮವಲ್ಲ ಎಂದು ತಿಳಿ ಹೇಳಿದ ಅವರು, ದೇಶದಾದ್ಯಂತ ನಡೆಯುತ್ತಿರುವ ದ್ವಿಚಕ್ರಗಳ ಅಪಘಾತದಲ್ಲಿ ಸರಿಸುಮಾರು ಅರ್ಧದಷ್ಟು ಚಾಲಕರು ಸಂಗೀತ ಕೇಳಿಕೊಂಡು ವಾಹನ ಚಲಾಯಿಸಿರುವುದೇ ಅವಘಡಕ್ಕೆ ಪ್ರಮುಖ ಕಾರಣವಾಗಿದೆ. ಈ ನಿಟ್ಟಿನಲ್ಲಿ ಒಂದೊಂದು ಕೆಲಸವನ್ನು ಪ್ರತ್ಯಕವಾಗಿ ಮಾಡಿದರೆ ಮಾತ್ರ ಅದರ ಪ್ರತಿಫಲ ಸಮರ್ಪಕವಾಗಿ ಸಿಗಲು ಸಾಧ್ಯ ಎಂಬ ವಾಸ್ತವಾಂಶವನ್ನು ಅರ್ಥಮಾಡಿಕೊಂಡು ಸಾಧನೆಯತ್ತ ಮುನ್ನುಗ್ಗಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಸಿ.ಜಗತ್ ತಿಮ್ಮಯ್ಯ, ಆಧುನಿಕ ಜೀವನ ಶೈಲಿಯಿಂದ ಮಧ್ಯವಯಸ್ಕರಲ್ಲಿ ಬೊಜ್ಜು ಹೆಚ್ಚಾಗುತ್ತಿದ್ದು, ಇದು ಹಲವಾರು ಕಾಯಿಲೆಗಳಿಗೆ ದಾರಿಮಾಡಿಕೊಡುತ್ತಿದೆಯಲ್ಲದೆ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ಪರೋಕ್ಷವಾಗಿ ತೊಡಕಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರತೀದಿನ ವ್ಯಾಯಾಮ ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಎನ್‍ಸಿಸಿ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ಮೇಜರ್ ಡಾ. ರಾಘವ್. ಬಿ, ದೇಹದ ಆರೋಗ್ಯ ಮತ್ತು ಮನಸ್ಸಿಗೆ ನಿಕಟ ಸಂಬಂಧವಿದ್ದು, ಉತ್ತಮ ಆರೋಗ್ಯ ಉತ್ತಮ ಮನಸ್ಥಿತಿಯನ್ನು ರೂಪಿಸಿಕೊಳ್ಳಲು ಅನುವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತೀದಿನದ ವ್ಯಾಯಾಗ ಅತ್ಯಗತ್ಯ ಎಂದು ಅವರು ತಿಳಿಸಿದರು. ವ್ಯಾಯಾಮಕ್ಕೆ ತಗಲುವ ಸಮಯ ಕಡಿಮೆಯಾದರೂ ಅದರಿಂದಾಗುವ ಪ್ರಯೋಜನಗಳು ಅಪಾರ ಎಂದು ಸಲಹೆ ನೀಡಿದರು. ಯುವ ಜನಾಂಗಗಳು ಸ್ಮಾರ್ಟ್‍ಫೋನಿನಲ್ಲಿ ಸಮಯ ಕಳೆಯುವ ಬದಲಾಗಿ, ದೈಹಿಕ ಶ್ರಮತೆ ಆಧಾರಿತ ಕೆಲಸ, ವ್ಯಾಯಾಮದಲ್ಲಿ ತೊಡಗಿಕೊಂಡರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ವೆಬಿನಾರಿಗೆ ತಾಂತ್ರಿಕ ನೆರವನ್ನು ಎಂಬಿಎ ಟ್ರಾವೆಲ್ ಎಂಡ್ ಟೂರಿಸಂ ವಿಭಾಗದ ಯೋಗಾನಂದ.ಜಿ.ಕೆ, ಶರತ್ ಮತ್ತು ವಾಣಿಜ್ಯ ವಿಭಾಗದ ಆಯುಶ್.ಜಿ.ಕೆ ಅವರು ನೀಡಿದ್ದರು. ಕೋವಿಡ್ 19 ಸಂಕಷ್ಟದಲ್ಲಿ ವೈಯಕ್ತಿಕ ಅಂತರವನ್ನು ಕಾಯ್ದುಕೊಂಡು ಎನ್‍ಸಿಸಿ ಕೆಡೆಟ್‍ಗಳು ಫಿಟ್ ಇಂಡಿಯಾ ಅಭಿಯಾನದ ಪ್ರಮಾಣವಚನ ಸ್ವೀಕರಿಸಿದರು.
ಸುಮಾರು ನೂರೈವತ್ತಕ್ಕೂ ಅಧಿಕ ಮಂದಿ ಆನ್‍ಲೈನಿನಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭ ಅಂತಿಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕೆಡೆಟ್ ಪ್ರಜ್ಞಾ.ಸಿ.ಜಿ, ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಡುತ್ತಾ ಸೂರ್ಯನಮಸ್ಕಾರದ ಹನ್ನೆರಡು ಭಂಗಿಗಳ ಜತೆಗೆ ಹನುಮಾನ್ ಆಸನ, ಏಕಪಾದರಾಜಕಪೋತಾಸನ, ಕರ್ಣಪೀಡಾಸನ, ಪದ್ಮಸರ್ವಾಂಗಸನ, ಏಕಪಾದ ಚಕ್ರಾಸನ ಮತ್ತು ಪ್ರಾಣಾಯಾಮವನ್ನು ಮಾಡಿ ತೋರಿಸಿದರೆ, ಇದರಿಂದಾಗುವ ಆರೋಗ್ಯಕ್ಕೆ ಅನುಕೂಲವಾಗುವ ಅಂಶವನ್ನು ದ್ವಿತೀಯ ವಿಜ್ಞಾನ ವಿಭಾಗದ ಕೆಡೆಟ್ ಪ್ರತೀಕ್ಷಾ.ಸಿ.ಐ ವಿವರಿಸಿದರು.