ನವದುರ್ಗಗಳಲ್ಲಿ ಒಂದೆನಿಸಿರುವ ಹುತ್ರಿದುರ್ಗ

12/09/2020

ನವದುರ್ಗಗಳಲ್ಲಿ ಒಂದೆನಿಸಿರುವ ಹುತ್ರಿದುರ್ಗವು ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು 65 ಕಿ.ಮಿ. ದೂರದಲ್ಲಿದೆ. ಕುಣಿಗಲ್‍ನಿಂದ ಆಗ್ನೇಯ ದಿಕ್ಕಿಗೆ 16 ಕಿ.ಮೀ. ದೂರವಿರುವ ಹುತ್ರಿದುರ್ಗವು ಮಾಗಡಿಯ ವಾಯುವ್ಯ ದಿಕ್ಕಿಗೆ ಸರಿಸುಮಾರು ಅಷ್ಟೇ ದೂರದಲ್ಲಿದೆ. ಇದು ತುಮಕೂರು ಜಿಲ್ಲೆಯಲ್ಲಿದೆ. ಮಾಗಡಿ-ಕುಣಿಗಲ್ ರಾಜ್ಯ ಹೆದ್ದಾರಿ-94 ರಿಂದ ಸುಮಾರು 7 ಕಿ.ಮಿ. ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 3712 ಅಡಿಗಳ ಎತ್ತರದಲ್ಲಿರುವ ಹುತ್ರಿದುರ್ಗದಲ್ಲಿರುವ ದೊಡ್ಡಬೆಟ್ಟದ ಮೇಲೆ ಹಳೆಯ ಕೋಟೆ ಮತ್ತು ದೇವಸ್ಥಾನವಿದೆ. ಬೆಟ್ಟದ ಬುಡದಲ್ಲಿ ಅದೇ ಹೆಸರಿನ ಹಳ್ಳಿಯೂ ಇದೆ. ವಿಜಯನಗರದ ಅರಸರ ಸಾಮಂತರಾಗಿದ್ದ ಯಲಹಂಕ ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ (ಕ್ರಿ.ಶ. 1534) ನಿರ್ಮಿಸಿದ ಕೋಟೆಯಿಂದಾಗಿ ಮತ್ತು 3ನೇ ಆಂಗ್ಲೋ ಮೈಸೂರು ಯುದ್ದದಿಂದಾಗಿ ಹುತ್ರಿದುರ್ಗವು ಐತಿಹಾಸಿಕವಾಗಿ ಮಹತ್ವ ಹೊಂದಿದೆ. ಹುತ್ರಿದುರ್ಗ ಹಳ್ಳಿಯನ್ನು ಸುತ್ತುವರೆದ ಎರಡು ಬೆಟ್ಟದತುದಿಗಳ ಮೇಲೆ ಈ ಕೋಟೆಯನ್ನು ಕಾಣಬಹುದು. ಇದು ಒಂದು ಏಳು ಸುತ್ತಿನ ಕೋಟೆಯಾಗಿತ್ತು. ಈಗ ಕೋಟೆ ಶಿಥಿಲಾವಸ್ಥೆಯಲ್ಲಿದೆ. ಬೆಟ್ಟದ ಮೇಲುಗಡೆ ಶಿವ ಮತ್ತು ನಂದಿ ಗುಡಿಯಿದೆ. ಪ್ರತಿ ಸೋಮವಾರ ಮತ್ತು ಶುಕ್ರವಾರದಂದು ಪೂಜೆ ಸಲ್ಲಿಸಲಾಗುತ್ತದೆ.

ಹುತ್ರಿದುರ್ಗದ ಇತಿಹಾಸ :
ಮಾಗಡಿ ಮತ್ತು ಕುಣಿಗಲ್ ನಡುವಿನ ಸಂತೇಪೇಟೆಯ ಬೆಟ್ಟಸಾಲುಗಳ ಮಧ್ಯದಲ್ಲಿ ಹುತ್ರಿ ಎಂಬ ಪುಟ್ಟಗ್ರಾಮವಿದೆ. ನಿಸರ್ಗದ ಮಡಿಲಿನಲ್ಲಿರುವ ಈ ಗ್ರಾಮದ ಸುತ್ತ ದೊಡ್ಡಬೆಟ್ಟ, ಬಸವನದುರ್ಗದ ಬೆಟ್ಟ ಹಾಗೂ ತಿರುಮಲ ಬೆಟ್ಟಗಳನ್ನು ಕಾಣಬಹುದಾಗಿದೆ. ಹುತ್ರಿ ಗ್ರಾಮವಿರುವ ಕಾರಣ ದಿಂದಾಗಿ ಇಲ್ಲಿರುವ ದೊಡ್ಡಬೆಟ್ಟವನ್ನು ಹುತ್ರಿ ಬೆಟ್ಟ ಎಂದು ಕರೆಯುತ್ತಾರೆ. ಮೂರು ಬೆಟ್ಟಗಳ ಮಧ್ಯದಲ್ಲಿರುವ ಹುತ್ರಿ ಗ್ರಾಮವನ್ನೂ ಸೇರಿಸಿಕೊಂಡು ಏಳುಸುತ್ತಿನ ಕೋಟೆಯನ್ನು ಯಲಹಂಕ ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ.
ಕೋಟೆಯ ನಿರ್ಮಾಣ ಕಾರ್ಯ ಕ್ರಿ.ಶ. 1534ರಲ್ಲಿ ಶುರುವಾಗಿರುವುದಾಗಿ ಕೋಟೆಯ ಎಲಿಯೂರು ದ್ವಾರದ ತೊಲೆಯ ಮೇಲಿರುವ ಶಾಸನದಿಂದ ತಿಳಿದುಬರುತ್ತದೆ. ಕೋಟೆಯಿರುವ ಕಾರಣದಿಂದಾಗಿ ಈ ಪ್ರದೇಶಕ್ಕೆ ಹುತ್ರಿದುರ್ಗ ಎಂಬ ಹೆಸರು ಬಂದಿದೆ. ಹುತ್ರಿದುರ್ಗವು ಸಮುದ್ರ ಮಟ್ಟದಿಂದ 3713 ಅಡಿ ಎತ್ತರದಲ್ಲಿದೆ. ಪುರಾಣಗಳಲ್ಲಿ ಕಾಮಗಿರಿ ಎಂತಲೂ, ಕೆಂಪೇಗೌಡರ ಸಂತತಿಯಲ್ಲಿ ಕೊನೆಯವರಾದ ಕೆಂಪವೀರಪ್ಪಗೌಡರ ಕಾಲದಲ್ಲಿ ದೇವಗಿರಿ ಎಂದೂ ಕರೆಸಿಕೊಂಡಿದೆ.
ಈ ದುರ್ಗವು ಮೈಸೂರು ಅರಸರ ನಂತರ ಟಿಪ್ಪು ಸುಲ್ತಾನನ ಆಳ್ವಿಕೆಯ ಪ್ರದೇಶವಾಗಿದ್ದು 1791-92ರಲ್ಲಿ ನಡೆದ 3ನೇ ಆಂಗ್ಲೋ-ಮೈಸೂರು ಯುದ್ದದ ವೇಳೆ ಬ್ರಿಟೀಷ್ ಸೇನಾಧಿಪತಿ ಲಾರ್ಡ್ ಕಾರ್ನ್‍ವಾಲೀಸ ಹಾಗು ಲೆಫ್ಟಿನೆಂಟ್ ಕರ್ನಲ್ ಸ್ಟುವರ್ಟ್ ಟಿಪ್ಪುವಿನ ಸೈನಿಕರನ್ನು ಇಲ್ಲಿಂದ ಓಡಿಸಿ ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆÀ. ಈ ವೇಳೆಯಲ್ಲಿ ಸುಸ್ಥಿತಿಯಲ್ಲಿದ್ದ ಕೋಟೆಯು ಮದ್ದು-ಗುಂಡುಗಳ ದಾಳಿಗೆ ಸಿಕ್ಕಿ ಕೋಟೆಯ ಬಾಗಿಲು ಸೇರಿದಂತೆ ಹಲವು ಭಾಗಗಳು ನಾಶವಾಗಿರುವುದು ತಿಳಿದು ಬರುತ್ತದೆ.
ಆಂಗ್ಲರ ಉಚ್ಛಾರಣೆಯ ದೋಷದಿಂದ ರೂಪಾಂತರಗೊಳ್ಳುವ ಹುತ್ರಿದುರ್ಗವು ಬ್ರಿಟೀಷ್ ಲೈಬ್ರರಿಯಲ್ಲಿನ ದಾಖಲೆಗಳಲ್ಲಿ “ಔಟ್ರ ಡ್ರೂಗ್” ಔUಖಿಖಂಆಖಔಔಉ ಎಂದು ದಾಖಲಾಗಿದೆ. 1799ರಲ್ಲಿ ನಡೆಯುವ 4ನೇ ಆಂಗ್ಲೋ-ಮೈಸೂರು ಯುದ್ದದಲ್ಲಿ ಬ್ರಿಟೀಷರು ಮೈಸೂರನ್ನು ವಶಪಡಿಸಿ ಕೊಳ್ಳುವವರೆಗೂ ಹುತ್ರಿದುರ್ಗವು ಬ್ರಿಟೀಷ್ ಸೈನ್ಯಕ್ಕೆ ಅಗತ್ಯವಾದ ಆಹಾರ, ದವಸ-ಧಾನ್ಯಗಳು ಮತ್ತು ಯುದ್ದದಲ್ಲಿ ಭಾಗವಹಿಸಿದ್ದ ಕುದುರೆಗಳಿಗೆ ಆಹಾರವನ್ನು ಪೂರೈಕೆ ಮಾಡುತ್ತಿತ್ತು.
ಅಲ್ಲದೇ ಇಲ್ಲಿ ಬ್ರಿಟೀಷ್ ಸೈನಿಕರಿಗೆ ಶುಶ್ರೂಷೆ ಮಾಡಲು ಆಸ್ಪತ್ರೆ ಹಾಗೂ ಶಸ್ತ್ರಾಸ್ತ್ರಗಳ ಸಂಗ್ರಹಗಾರಗಳು ಇದ್ದವೆಂಬುದು ಬ್ರಿಟೀಷ್ ಲೈಬ್ರರಿಯಲ್ಲಿನ ದಾಖಲೆಗಳಿಂದ ತಿಳಿದುಬರುತ್ತದೆ. ಕೋಟೆಯ ರಚನೆಗೆ ಹಾಗೂ ಕೋಟೆಯ ಸುತ್ತಲಿನ ನಿಸರ್ಗ ಸೌಂದರ್ಯಕ್ಕೆ ಮನಸೋತ ಬ್ರಿಟೀಷ್ ಚಿತ್ರಕಾರರು ತಮ್ಮ ಕುಂಚದಿಂದ ಹಲವಾರು ಸುಂದರ ಚಿತ್ರಗಳನ್ನು ರಚಿಸಿರುವುದು ಹುತ್ರಿದುರ್ಗದ ನಿಸರ್ಗ ರಮಣೀಯತೆಗೆ ಸಾಕ್ಷಿಯಾಗಿದೆ.