ಕೊಡವ ಸಮಾಜಗಳ ಒಕ್ಕೂಟದ ಮಹಾಸಭೆ : ತಲಕಾವೇರಿಯನ್ನು ಧಾರ್ಮಿಕ ಕ್ಷೇತ್ರವನ್ನಾಗಿಸಲು ಮುಖ್ಯಮಂತ್ರಿಗಳ ಬಳಿಗೆ ನಿಯೋಗ

12/09/2020

ಮಡಿಕೇರಿ ಸೆ. 12 : ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಧಾರ್ಮಿಕ ಕ್ಷೇತ್ರವನ್ನಾಗಿ ಮಾತ್ರ ಆದೇಶ ಹೊರಡಿಸಲು ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಲು ಕೊಡವ ಸಮಾಜಗಳ ಒಕ್ಕೂಟದ ಮಹಾಸಭೆಯಲ್ಲಿ ನಿರ್ಧರಿಸಲಾಗಿದೆ.

ಬಾಳುಗೋಡು ಸಮಾಜದಲ್ಲಿ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಕೊಡಗಿನ ಭಾಗಮಂಡಲ ಹಾಗೂ ತಲಕಾವೇರಿ ಪುಣ್ಯಕ್ಷೇತ್ರಗಳಲ್ಲಿ ಯಾವುದೇ ಕಾರಣಕ್ಕೂ ಮೋಜು ಮಸ್ತಿಗೆ ಅವಕಾಶ ನೀಡಬಾರದು, ಇದು ಪ್ರವಾಸಿತಾಣವಲ್ಲ ಎಂಬ ಬಗ್ಗೆ ಸರಕಾರಕ್ಕೆ ಮನವಿ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. ಆ ಹಿನ್ನೆಲೆ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗಳಿಗೆ ಒಕ್ಕೂಟದ ನೇತೃತ್ವದಲ್ಲಿ ನಿಯೋಗ ತೆರಳಿ ಈ ಸ್ಥಾನವನ್ನು ಧಾರ್ಮಿಕ ಕ್ಷೇತ್ರವನ್ನಾಗಿಯೇ ಉಳಿಸಲು ಶ್ರಮಿಸುವಂತೆ ಮನವಿ ಮಾಡಲು ತೀರ್ಮಾನ ಕೈಗೊಳ್ಳಲಾಯಿತು. ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಕಾವೇರಿ ಸಂಕ್ರಮಣಕ್ಕಿಂತ ಮುಂಚಿತವಾಗಿ ಕೊಡಗಿನಲ್ಲಿರುವ ಎಲ್ಲಾ ಜನಾಂಗದ ಮುಖಂಡರ ಸಭೆ ಕರೆದು ಒಮ್ಮತ್ತದ ತೀರ್ಮಾನವನ್ನು ಕೈಗೊಳ್ಳುವಂತೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.

ಕೊಡಗಿನ ಎಲ್ಲಾ ಜನಾಂಗದವರ ಮುಖಂಡರ ಸಭೆ ನಡೆಸಿ ಅಭಿಪ್ರಾಯ ಪಡೆಯುವುದರೊಂದಿಗೆ ಧಾರ್ಮಿಕ ಕ್ಷೇತ್ರದಿಂದ 8.ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ರೆಸಾರ್ಟ್, ಹೋಂಸ್ಟೆಗಳಿಗೆ ಅವಕಾಶ ನೀಡದಿರಲು ಒತ್ತಾಯಿಸಲು ನಿರ್ಧರಿಸಲಾಯಿತು.

ಕೋವಿಡ್ 19 ಮಹಾಮಾರಿಯಿಂದ ಜಿಲ್ಲೆಯ ಜನತೆ ಸಂಕಷ್ಟದಲ್ಲಿದ್ದು, ಮದುವೆ, ಸಭೆ ಸಮಾರಂಭಗಳು ಮುಂದೂಡಲ್ಪಟ್ಟಿದೆ. ಆದ್ದರಿಂದ ಮುಂದಿನ ದಿನದಲ್ಲಿ ಸಮಾಜದ ಬಾಡಿಗೆಯನ್ನು ಕಡಿಮೆ ಮಾಡಿ ಜನತೆಗೆ ಸಹಕಾರ ನೀಡಲು ತೀರ್ಮಾನಿಸಲಾಯಿತು. ಜೊತೆಗೆ ಕೋವಿಡ್ ಹಿನ್ನೆಲೆ ವರ್ಷಪ್ರಂತಿ ನಡೆಸಿಕೊಂಡು ಬರಲಾಗುತ್ತಿದ್ದ ಕೊಡವ ನಮ್ಮೆಯನ್ನು ಈ ವರ್ಷ ನಡೆಸದಿರಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಮಾಜಕ್ಕೆ ತೆರಳುವ ಎರಡು ಕಡೆ ಕಾಂಕ್ರೀಟ್ ರಸ್ತೆ ಮಾಡಿಕೊಟ್ಟ ಲೋಕೋಪಯೋಗಿ ಇಲಾಖೆಯ ಅಭಿಯಂತರರಿಗೆ ಅಭಿನಂದನೆ ಸಲ್ಲಿಸಲಾಯಿತು. ಹಾಗೂ ಮುಂದಿನ ದಿನದಲ್ಲಿ ನೀರು ಹರಿಯಲು ಕಾಂಕ್ರೀಟ್ ಚರಂಡಿ ಮಾಡಿಕೊಡಲು ಸಹಕರಿಸಲು ಕೇಳಿಕೊಳ್ಳುವಂತೆ ತೀರ್ಮಾನಿಸಲಾಯಿತು.

ಪ್ರಸ್ತಕ ಸಾಲಿನ ಮಳೆಯಲ್ಲಿ ಗಜಗಿರಿ ಬೆಟ್ಟದ ಭೂ ಕುಸಿತಕ್ಕೆ ಸಿಲುಕಿದ ಅರ್ಚಕ ಕುಟುಂಬದ ಐವರಿಗೆ ವಿಷಾಧ ವ್ಯಕ್ತ ಪಡಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಸಲ್ಲಿಸಲಾಯಿತು. ಇದೇ ಸಂದರ್ಭ ಇತ್ತೀಚೆಗೆ ನಿಧನರಾದ ಸಮಾಜದ ದಾನಿ, ಬೆಂಗಳೂರು ಕೊಡವ ಸಮಾಜದ ಮಾಜಿ ಅಧ್ಯಕ್ಷರಾಗಿದ್ದ ಬೇರೆರ ಶಂಭು ಅಯ್ಯಣ್ಣ ಅವರಿಗೆ ಶೃದ್ಧಾಂಜಲಿ ಸಲ್ಲಿಸಿ, 2 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಕೊಡವ ಸಮಾಜ ಒಕ್ಕೂಟದ ಉಪಾಧ್ಯಕ್ಷರಾದ ಮಾಳೇಟೀರ ಅಭಿಮನ್ಯಕುಮಾರ್, ಕೊಂಗಂಡ ಎಸ್. ದೇವಯ್ಯ, ಮುಕ್ಕಾಟೀರ ಟಿ. ನಾಣಯ್ಯ, ಕಾರ್ಯದರ್ಶಿ ವಾಟೇರೀರ ಶಂಕರಿ ಪೂವಯ್ಯ ಮತ್ತಿತರರು ಹಾಜರಿದ್ದರು.

ಸಭೆಯಲ್ಲಿ ವೀರಾಜಪೇಟೆ, ನಾಪೋಕ್ಲು, ಚೆಯ್ಯಂಡಾಣೆ, ಚೇರಂಬಾಣೆ, ಮಡಿಕೇರಿ, ಬೆಂಗಳೂರು, ಪೊನ್ನಂಪೇಟೆ, ಕುಟ್ಟ, ಮೂರ್ನಾಡು, ಸೋಮವಾರಪೇಟೆ, ಕೊಡವ ಸಮಾಜದ ಪದಾಧಿಕಾರಿಗಳು ಹಾಜರಿದ್ದರು.

ಸಭೆಗೂ ಮೊದಲು ಪ್ರಸ್ತಕ ಸಾಲಿನ ಕೈಲ್ ಮೂಹೂರ್ತ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಆಟೋಟ ಸಮಿತಿ ವತಿಯಿಂದ ಟೆನಿಸ್‍ಬಾಲ್‍ನಿಂದ ತೆಂಗಿನ ಕಾಯಿಗೆ ಗುರಿ ಎಸೆತ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸಮಾಜದ ಕಾರ್ಯದರ್ಶಿ ಶಂಕರಿ ಪೂವಯ್ಯ ವಂದಿಸಿದರು.