ಬುಡಕಟ್ಟು ಬೇಡಿಕೆಗೆ ಬೆಂಬಲ ಸರಿಯಲ್ಲ : ವಕೀಲ ಬಿ.ಎ.ಮಾಚಯ್ಯ ಅಸಮಾಧಾನ

12/09/2020

ಮಡಿಕೇರಿ ಸೆ.12 : ಸಂಘಟನೆಯೊಂದು ಕೊಡವರನ್ನು ಬುಡಕಟ್ಟು ಜನಾಂಗವೆಂದು ಘೋಷಿಸುವಂತೆ ಒತ್ತಾಯಿಸಿರುವ ಬೇಡಿಕೆಗೆ ಅಖಿಲ ಕೊಡವ ಸಮಾಜ ಬೆಂಬಲ ಸೂಚಿಸುವುದು ಸರಿಯಲ್ಲವೆಂದು ಹಿರಿಯ ವಕೀಲ ಬಿ.ಎ.ಮಾಚಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 33 ಕೊಡವ ಸಮಾಜಗಳನ್ನು ಪ್ರತಿನಿಧಿಸುವ ಅಖಿಲ ಕೊಡವ ಸಮಾಜದ ಅಧ್ಯಕ್ಷರು ಅರ್ಥಹೀನ ಬೇಡಿಕೆಗೆ ಬೆಂಬಲ ಸೂಚಿಸುತ್ತಿರುವುದು ಸರಿಯಲ್ಲವೆಂದರು. ಕೊಡವರು ಬುಡಕಟ್ಟು ಜನಾಂಗವಲ್ಲ ಎಂಬುದಕ್ಕೆ ಅಗತ್ಯ ಸಾಕ್ಷ್ಯಗಳು ಇತಿಹಾಸದ ಪುಟಗಳಲ್ಲಿ ಅಡಗಿದೆ. ಆದರೆ, ಬೇಡಿಕೆಯನ್ನು ಮುಂದಿಟ್ಟವರು ಇತಿಹಾಸವನ್ನು ತಿರುಚುತ್ತಿದ್ದಾರೆ ಎಂದು ಆರೋಪಿಸಿದರು.
ಕೊಡವ ಜನಾಂಗದ ಬಗ್ಗೆ ಕರ್ನಾಟಕ ಗೆಜೆಟಿಯರ್‍ನಲ್ಲಿ ಸ್ಪಷ್ಟ ಉಲ್ಲೇಖಗಳಿದ್ದು, ಅದರಲ್ಲಿ ಕೊಡವರು ಹುಟ್ಟಿನಿಂದಲೆ ಸಾಹಸಿಗಳು, ಧೀರರು ಹಾಗೂ ಶೌರ್ಯಕ್ಕೆ ಪ್ರಸಿದ್ಧರಾದವರು ಎಂದು ಹೇಳಲಾಗಿದೆ. ಅರಸರ ಕಾಲದಿಂದಲೆ ಹೋರಾಟಗಳಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಭಾರತದ ಎಲ್ಲಾ ಸೇನಾ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಫೀ.ಮಾ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸೇರಿದಂತೆ ಅನೇಕರು ಕೊಡವ ಬೈ ರೇಸ್ ಅಡಿಯಲ್ಲೆ ತಮ್ಮ ಜಾತಿಯನ್ನು ದಾಖಲೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ದುರುದ್ದೇಶದಿಂದ ಕೊಡವರ ಹೆಸರಿಗೆ ಮಸಿ ಬಳಿಯುವ ಕಾರ್ಯದಲ್ಲಿ ಕೆಲವರು ತೊಡಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಟ್ಟ, ಗುಡ್ಡ ಮತ್ತು ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವವರೆಲ್ಲ ಬುಡಕಟ್ಟು ಜನಾಂಗವಾಗಲು ಸಾಧ್ಯವಿಲ್ಲ, ಜಾತಿ ಬೇರೆ, ಜನಾಂಗ ಬೇರೆ. ಇದನ್ನು ನಿರ್ಧರಿಸುವುದು ಆಯಾ ಜನಾಂಗದ ಸಂಸ್ಕೃತಿ, ಹಾವ ಭಾವ, ಜೀವನ ಪದ್ಧತಿ. ಯೋಧ ಜನಾಂಗದವರಾಗಿರುವ ಕೊಡವರನ್ನು ಕೊಡವ ಜಾತಿ ಎಂದು ನಿರ್ಧರಿಸಲಾಗುತ್ತದೆಯೇ ಹೊರತು ಬೆಟ್ಟ ಗುಡ್ಡಗಳ ಆಧಾರದಲ್ಲಿ ಬುಡಕಟ್ಟು ಜನಾಂಗವೆಂದು ಗುರುತಿಸಲು ಸಾಧ್ಯವಿಲ್ಲ. ಇನ್ನಾದರು ಅಖಿಲ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಜನ ಪ್ರತಿನಿಧಿಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ನಡೆದುಕೊಳ್ಳಬೇಕೆಂದು ಮಾಚಯ್ಯ ಹೇಳಿದರು.
ಬುಡಕಟ್ಟು ಜನಾಂಗದ ಬೇಡಿಕೆಯನ್ನು ಮುಂದಿಟ್ಟಿರುವ ಸಂಘಟನೆಯೊಂದು ಬೆಂಗಳೂರಿನಲ್ಲಿ ಅಕ್ರಮ ಆಸ್ತಿ ಹೊಂದಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ಬೆಲ್ಲತಂಡ ವಿವೇಕ್ ಗಣಪತಿ ಮಾತನಾಡಿ, ನೋಂದಣಿಯಾಗದ ಸಂಘಟನೆಯೊಂದು ಇದೀಗ ಕೊಡವ ಸಮುದಾಯದ ಎಲ್ಲರಿಗೂ ಸಮ್ಮತವಲ್ಲದ ಬುಡಕಟ್ಟು ಬೇಡಿಕೆಯನ್ನು ಮುಂದಿಟ್ಟಿದ್ದು, ಇದರ ಹಿಂದೆ ಅಕ್ರಮ ಹಣದ ಪ್ರಭಾವವಿದೆ ಎಂದು ಆರೋಪಿಸಿದರು. ಧಾನ್ಯಲಕ್ಷ್ಮಿ ಎಂದೇ ಪೂಜಿಸಲ್ಪಡುವ ಭತ್ತ ಬೆಳೆಯುವ ಗದ್ದೆಯಲ್ಲಿ ಶೂ ಹಾಕಿ ನಾಟಿ ಮಾಡಿದ ಮಂದಿ ಇದೀಗ ಕೊಡವ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಕನ್ನಿ ಕಾವೇರಿ ಟ್ರಸ್ಟ್ ಸಂಚಾಲಕ ಶಂಕರಿ ಪೊನ್ನಪ್ಪ ಅವರು ಮಾತನಾಡಿ, ಕೊಡವ ಸಮುದಾಯವನ್ನು ಬುಡಕಟ್ಟು ಸಮುದಾಯಕ್ಕೆ ಸೇರಿಸಬೇಕೆನ್ನುವ ಬೇಡಿಕೆ ಏಕಪಕ್ಷೀಯವಾದುದು. ಈ ಬೇಡಿಕೆ ಮುಂದಿಡಬೇಕಾದಲ್ಲಿ ಕೊಡವ ಭಾಷಿಕ 18 ಜನಾಂಗಗಳ ಅಭಿಪ್ರಾಯವನ್ನು ಸಂಗ್ರಹಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪುಚ್ಚಿಮಂಡ ಬಬ್ಲು ಅಪ್ಪಯ್ಯ, ಪುಚ್ಚಿಮಂಡ ಕಾವೇರಿ ಅಪ್ಪಯ್ಯ ಹಾಗೂ ಬೆಲ್ಲತಂಡ ರಾಣಿ ಮಾಚಯ್ಯ ಉಪಸ್ಥಿತರಿದ್ದರು.