ಪವಿತ್ರ ಕ್ಷೇತ್ರ ತಲಕಾವೇರಿ ರಸ್ತೆಯೇ ಸರಿ ಇಲ್ಲ

13/09/2020

ಮಡಿಕೇರಿ ಸೆ.13 : ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಪ್ರವಾಸಿತಾಣವೆಂದು ವಿಜೃಂಬಿಸಬಾರದು, ಪವಿತ್ರ ಧಾರ್ಮಿಕ ಕ್ಷೇತ್ರವಾಗಿಯೇ ಗೌರವಿಸಲ್ಪಡಬೇಕೆನ್ನುವ ಚರ್ಚೆಯ ನಡುವೆಯೇ ಇಲ್ಲಿನ ಅವ್ಯವಸ್ಥೆಗಳ ಬಗ್ಗೆಯೂ ಅಪಸ್ವರಗಳಿವೆ. ಕ್ಷೇತ್ರಕ್ಕೆ ತೆರಳುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ರಾಜ್ಯ ಮತ್ತು ಹೊರ ರಾಜ್ಯಗಳಿಂದ ಆಗಮಿಸುತ್ತಿರುವ ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಅತಿ ಮಳೆಯ ಕಾರಣದಿಂದಲೇ ರಸ್ತೆ ಹದಗೆಡುತ್ತಿದೆ ಎನ್ನುವ ಕಾರಣ ನೀಡಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ರಸ್ತೆಗಾಗಿ ಪ್ರತಿವರ್ಷ ಲಕ್ಷಾಂತರ ರೂ. ಅನುದಾನವನ್ನು ಖರ್ಚು ಮಾಡಿ ಪೋಲು ಮಾಡುತ್ತಿರುವ ಬಗ್ಗೆ ಸ್ಥಳೀಯ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ವಋತು ರಸ್ತೆ ನಿರ್ಮಾಣದ ಮಾತುಗಳು ಕಳೆದ ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಕನಿಷ್ಠ ದುರಸ್ತಿ ಕಾರ್ಯವನ್ನು ಕೂಡ ಗುಣಮಟ್ಟದಿಂದ ನಡೆಸುತ್ತಿಲ್ಲ. ಪ್ರತಿವರ್ಷ ತೇಪೆ ಕಾರ್ಯ ನಡೆಯುತ್ತಿದ್ದು, ಹೊಂಡ, ಗುಂಡಿಗಳ ರಸ್ತೆಯಲ್ಲಿ ವಾಹನ ಚಾಲಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಚುನಾಯಿತ ಪ್ರತಿನಿಧಿಗಳಿಗೆ ಸಂಪೂರ್ಣ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ತಾಳತ್ತಮನೆಯ ಬಳಿ ರಸ್ತೆಯ ಹೊಂಡ, ಗುಂಡಿಗಳಲ್ಲಿ ಬಾಳೆ ಗಿಡಗಳನ್ನು ನೆಟ್ಟು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪವಿತ್ರ ಕ್ಷೇತ್ರ ತಲಕಾವೇರಿಗೆ ತೆರಳುವ ರಸ್ತೆಯನ್ನೇ ಕಡೆಗಣಿಸಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬೇರೆ ಯಾವ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಮಳೆ ನಿಂತ ತಕ್ಷಣ ಗುಣಮಟ್ಟದ ಕಾಮಗಾರಿಯೊಂದಿಗೆ ರಸ್ತೆಯನ್ನು ದುರಸ್ತಿ ಪಡಿಸದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.