ಕೊಡಗಿನ ಹಲವೆಡೆ ಉತ್ತಮ ಮಳೆ : ಮಡಿಕೇರಿಯಲ್ಲಿ ಚಳಿ

13/09/2020

ಮಡಿಕೇರಿ ಸೆ.13 : ಕೊಡಗಿನ ಹವಾಗುಣದಲ್ಲಿ ಮತ್ತೆ ಏರುಪೇರಾಗಿದ್ದು, ಬಹುತೇಕ ಕಡೆ ಉತ್ತಮ ಮಳೆಯಾಗಿದೆ. ಮಡಿಕೇರಿ, ಭಾಗಮಂಡಲ, ತಲಕಾವೇರಿ, ಸಿದ್ದಾಪುರ, ಗೋಣಿಕೊಪ್ಪ, ನಾಪೋಕ್ಲು, ಸಂಪಾಜೆ ಭಾಗದಲ್ಲಿ ಭಾನುವಾರ ನಿರಂತರವಾಗಿ ಮಳೆ ಸುರಿದಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಮತ್ತು ಬಲಮುರಿಯಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಮಡಿಕೇರಿ ನಗರದಲ್ಲಿ ಉತ್ತಮ ಮಳೆಯೊಂದಿಗೆ ಮೈಕೊರೆಯುವ ಚಳಿ ಇದ್ದು, ಮಂಜು ಮುಸುಕಿದ ವಾತಾವರಣ ಮುದ ನೀಡಿದೆ.
ಅತಿ ಹೆಚ್ಚು ಅಂದರೆ 50.2ಮಿ.ಮೀ. ಮಳೆ ಮಡಿಕೇರಿ ತಾಲೂಕಿನಲ್ಲಿ ದಾಖಲಾಗಿದ್ದು, ವೀರಾಜಪೇಟೆ ತಾಲೂಕಿನಲ್ಲಿ 21.2 ಮಿ.ಮೀ. ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 16.76 ಮಿ.ಮೀ.ಮಳೆಯಾಗಿದೆ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 29.6, ನಾಪೋಕ್ಲು 50.2, ಸಂಪಾಜೆ 60, ಭಾಗಮಂಡಲ 61, ವೀರಾಜಪೇಟೆ ಕಸಬಾ 25.4, ಹುದಿಕೇರಿ 43, ಶ್ರೀಮಂಗಲ 31, ಪೊನ್ನಂಪೇಟೆ 14.2, ಬಾಳೆಲೆ 3.6, ಅಮ್ಮತ್ತಿ 10, ಸೋಮವಾರಪೇಟೆ ಕಸಬಾ 9.4, ಶನಿವಾರಸಂತೆ 16, ಶಾಂತಳ್ಳಿ 30, ಕೊಡ್ಲಿಪೇಟೆ 18.2, ಸುಂಟಿಕೊಪ್ಪ 15, ಕುಶಾಲನಗರ 12 ಮಿ.ಮೀ.ಮಳೆಯಾಗಿದೆ.
::: ಹಾರಂಗಿ ಮಟ್ಟ :::
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಭಾನುವಾರ ಜಲಾಶಯದ ನೀರಿನ 2856.42 ಅಡಿಗಳಷ್ಟಿತ್ತು. ಪ್ರಸಕ್ತ ಜಲಾಶಯಕ್ಕೆ 1976 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ನದಿಗೆ 500 ಹಾಗೂ ನಾಲೆಗೆ 700ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.