ಕೋವಿಡ್ ಸೋಂಕಿಗೆ ಕೊಡಗಿನಲ್ಲಿ ಮತ್ತೊಂದು ಸಾವು

ಮಡಿಕೇರಿ ಸೆ.13 : ಕೋವಿಡ್ ಸೋಂಕಿನಿಂದ ಭಾನುವಾರ ಮತ್ತೊಂದು ಸಾವು ಸಂಭವಿಸಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 27 ಕ್ಕೇರಿದೆ.
ವೀರಾಜಪೇಟೆ ತಾಲೂಕಿನ ಕೊಂಡಂಗೇರಿ ನಿವಾಸಿ 61 ವರ್ಷದ ಪುರುಷ ಸಾವಿಗೀಡಾದವರು.
ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಎರಡು ದಿನಗಳ ಹಿಂದೆ ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಮೂರ್ನಾಡುವಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಆದರೆ ಭಾನುವಾರ ಬೆಳಗಿನ ಜಾವ 5.30 ಗಂಟೆಗೆ ಅವರನ್ನು ಪ್ರಜಾಹೀನ ಸ್ಥಿತಿಯಲ್ಲಿ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಕರೆತರಲಾಗಿದ್ದು, ತಕ್ಷಣವೇ ಅವರನ್ನು ಸಮಗ್ರ ಪರಿಶೀಲನೆಗೆ ಒಳಪಡಿಸಿದಾಗ ಅವರು ಮೃತಪಟ್ಟಿರುವುದು ದೃಢಪಟ್ಟಿದೆ.
ರ್ಯಾಪಿಡ್ ಆಂಟಿಜೆನ್ ಕಿಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಿದಾಗ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಮೃತ ದೇಹದ ಅಂತ್ಯಕ್ರಿಯೆಯನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.