ಅಪಾಯದಲ್ಲಿದೆ ಕತ್ತಲೆಕಾಡು- ಅಬ್ಯಾಲ ರಸ್ತೆ

14/09/2020

ಮಡಿಕೇರಿ ಸೆ.13 : ಜಿಲ್ಲೆಯಲ್ಲಿ ಮಹಾಮಳೆಯ ಆರ್ಭಟ ಕಡಿಮೆಯಾಗಿದ್ದರೂ ಅದು ಮಾಡಿರುವ ಅನಾಹುತ ಮಾತ್ರ ಶಾಶ್ವತವಾಗಿದೆ. ಸಿದ್ದಾಪುರ, ಕತ್ತಲೆಕಾಡು, ಅಬ್ಯಾಲ, ಚೆಟ್ಟಳ್ಳಿ ವ್ಯಾಪ್ತಿಯ ರಸ್ತೆಗಳು ಧಾರಾಕಾರ ಮಳೆಯಿಂದ ಅಲ್ಲಲ್ಲಿ ಕುಸಿದು ಬಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ.
ರಸ್ತೆಯ ಎಡಭಾಗ ಮಳೆಯ ಪರಿಣಾಮ ಕುಸಿಯುತ್ತಲೇ ಇದ್ದು, ಬಲ ಭಾಗದ ಬರೆ ಕೂಡ ಬೀಳುತ್ತಿದೆ. ಎಡಭಾಗದಲ್ಲಿ ಮರಳಿನ ಚೀಲಗಳನ್ನು ತಾತ್ಕಾಲಿಕವಾಗಿ ಅಡ್ಡಲಾಗಿ ಇಡಲಾಗಿದೆಯಾದರೂ ನೂರಾರು ಅಡಿ ಪ್ರಪಾತದ ಪ್ರದೇಶವಾಗಿರುವುದರಿಂದ ವಾಹನಗಳು ಅಪಾಯಕ್ಕೆ ಸಿಲುಕುವ ಎಲ್ಲಾ ಸಾಧ್ಯತೆಗಳಿದೆ.
ಇದೀಗ ಭಾರೀ ವಾಹನಗಳ ಸಂಚಾರವೂ ಆರಂಭಗೊಂಡಿದೆ. ಜೊತೆಯಲ್ಲಿ ಬಸ್ ಗಳೂ ಓಡಾಡಲು ಆರಂಭಿಸಿದರೆ ಅತಿ ಕಿರಿದಾದ ರಸ್ತೆಯಲ್ಲಿ ಅನಾಹುತ ಸಂಭವಿಸುವುದು ಖಚಿತವಾಗಿದೆ. ರಾತ್ರಿ ವೇಳೆಯಲ್ಲಂತೂ ಭಾರ ತುಂಬಿದ ಲಾರಿಗಳು ಸ್ವಲ್ಪ ನಿಯಂತ್ರಣ ತಪ್ಪಿದರೂ ಪ್ರಪಾತಕ್ಕೆ ಬೀಳುವ ಎಲ್ಲಾ ಸಾಧ್ಯತೆಗಳಿದೆ ಎಂದು ಸ್ಥಳೀಯ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಮರಳಿನ ಚೀಲಗಳು ಇಲ್ಲಿನ ಸಮಸ್ಯೆಗೆ ಪರಿಹಾರವಲ್ಲ, ಸರ್ವಋತುವಿಗೆ ಹೊಂದಿಕೊಳ್ಳುವಂತೆ ರಸ್ತೆ ಮತ್ತು ತಡೆಗೋಡೆ ನಿರ್ಮಾಣದ ಯೋಜನೆಯನ್ನು ರೂಪಿಸಬೇಕಾಗಿದೆ. ಮಳೆ ನಿಂತ ಮೇಲೆ ಅಪಾಯಕಾರಿ ರಸ್ತೆಯ ಸ್ಥಿತಿಗತಿಯನ್ನು ಮರೆತರೆ ಅನಾಹುತವನ್ನು ಆಹ್ವಾನಿಸಿದಂತ್ತಾಗುತ್ತದೆ. ಕಳೆದ ಕೆಲವು ದಿನಗಳಿಂದ ಮಳೆ ಮತ್ತೆ ತೀವ್ರತೆಯನ್ನು ಪಡೆದುಕೊಂಡಿರುವುದರಿಂದ ರಸ್ತೆ ಸಂಪೂರ್ಣವಾಗಿ ಕುಸಿದು ಬಿದ್ದರೆ ಸಂಚಾರ ಸ್ಥಗಿತಗೊಳ್ಳುವ ಎಲ್ಲಾ ಸಾಧ್ಯತೆಗಳಿದೆ. ಈಗಿರುವ ರಸ್ತೆಯ ದುಸ್ಥಿತಿಯಿಂದಲೇ ಬೇಸತ್ತಿರುವ ಬಹುತೇಕ ವಾಹನ ಚಾಲಕರು ಸುಂಟಿಕೊಪ್ಪ ರಸ್ತೆಯ ಮೂಲಕ ಚೆಟ್ಟಳ್ಳಿಯನ್ನು ಪ್ರವೇಶಿಸುತ್ತಿದ್ದಾರೆ.
ಸಾಕಷ್ಟು ಹಾನಿಗೊಳಗಾಗಿ ಅಪಾಯವನ್ನು ಆಹ್ವಾನಿಸುತ್ತಿರುವ ರಸ್ತೆಗಳ ಪರಿಶೀಲನೆಯನ್ನು ಹಿರಿಯ ಅಧಿಕಾರಿಗಳು ಮಾಡದೆ ಇರುವ ಬಗ್ಗೆ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣ ಸಂಬಂಧಿಸಿದ ಇಲಾಖೆ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಅಪಾಯವನ್ನು ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.