ಬಸವೇಶ್ವರನ ಮೇಲೆ ಗಜರಾಜನ ಕೋಪ : ಪುಂಡಾನೆ ಸೆರೆಗೆ ನಿಗಧಿಯಾಗಲಿದೆ ಮುಹೂರ್ತ

14/09/2020

ಮಡಿಕೇರಿ ಸೆ.13 : : ಆ ಒಂಟಿ ಪುಂಡಾನೆಗೆ ಯಾರ ಮೇಲೆ ಸಿಟ್ಟೋ ಗೊತ್ತಿಲ್ಲ, ಆದರೆ ಅದು ತೋರಿದ ದರ್ಪ ಮಾತ್ರ ಬಸವೇಶ್ವರನ ನೆಲೆಯ ಮೇಲೆ. ರಾತ್ರಿ ಪೂರ್ತಿ ಗೀಳಿಟ್ಟ ಕಾಡಾನೆ ದೇವಾಲಯದ ಗಂಟೆಗಳನ್ನು ಬೀಳಿಸಿತು, ಎದುರಿಗಿದ್ದ ದೊಡ್ಡ ಕಲ್ಲಿನ ದೀಪವನ್ನು ಪುಡಿಗಟ್ಟಿತು. ಇಷ್ಟೂ ಸಾಲದೆಂಬಂತೆ ದೇವಾಲಯಕ್ಕೆ ಸೇರಿದ ಒಂದು ಎಕರೆ ತೋಟದ ಮೇಲೆ ದಾಳಿ ಮಾಡಿತು. ಅಲ್ಲಿದ್ದ ಕಾಫಿ, ಬಾಳೆ, ಅಡಿಕೆ, ತೆಂಗು ಇನ್ನಿತರ ಕೃಷಿಯನ್ನು ಸಂಪೂರ್ಣವಾಗಿ ನಾಶ ಮಾಡಿತು.
ಇದಿಷ್ಟು ಘಟನೆ ನಡೆದದ್ದು ಅಭ್ಯತ್ ಮಂಗಲ ಗ್ರಾಮದ ಶ್ರೀಬಸವೇಶ್ವರ ದೇವಾಲಯದ ಆವರಣದಲ್ಲಿ. ನಡುರಾತ್ರಿ ದೇವಾಲಯದಲ್ಲಿ ಗಂಟೆ ಬಾರಿಸುವ ಶಬ್ಧ ಕೇಳಿ ಬೆಚ್ಚಿಬಿದ್ದ ಗ್ರಾಮಸ್ಥರು ಮನೆಯಿಂದ ಹೊರ ಬರುವ ಧೈರ್ಯ ಮಾಡಲಿಲ್ಲ. ನಿರಂತರವಾಗಿ ಮೂರು ದಿನಗಳಿಂದಲೂ ಗಂಟೆ ಬಾರಿಸುವ ಶಬ್ಧ ಕೇಳಿದ್ದು, ನಾಲ್ಕನೇ ದಿನ ಹಗಲಿನಲ್ಲಿ ಗ್ರಾಮಸ್ಥರು ದೇವಾಲಯದ ಆವರಣ ಪರಿಶೀಲಿಸಿದಾಗ ಗಂಟೆಗಳು ಕೆಳಗೆ ಬಿದ್ದಿದ್ದವು, ಎದುರಿನಲ್ಲಿದ್ದ ಕಲ್ಲಿನ ದೊಡ್ಡ ದೀಪ ತುಂಡಾಗಿ ಬಿದ್ದಿತ್ತು. ಪಕ್ಕದಲ್ಲೇ ಇದ್ದ ದೇವಾಲಯಕ್ಕೆ ಸೇರಿದ ತೋಟವನ್ನು ಗಮನಿಸಿದಾಗ ಸಂಪೂರ್ಣವಾಗಿ ಹಾನಿಗೀಡಾಗಿರುವುದು ಕಂಡು ಬಂತು. ಇದು ಕಾಡಾನೆಯದ್ದೇ ಉಪಟಳ ಎಂದು ಖಾತ್ರಿಯಾಗಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
::: ಗಡಿ ಗೊಂದಲ :::
ಸೋಮವಾರಪೇಟೆ ಮತ್ತು ಮಡಿಕೇರಿ ತಾಲ್ಲೂಕಿನ ಗಡಿ ಗ್ರಾಮಗಳಾದ ಹೊಸ್ಕೇರಿ ಹಾಗೂ ಅರೆಕಾಡು ಭಾಗದಲ್ಲಿ ಈ ಒಂಟಿ ಸಲಗದ ದಾಂಧಲೆ ನಡೆಯುತ್ತಿರುವುದರಿಂದ ಎರಡೂ ಅರಣ್ಯ ವಲಯಗಳಿಗೆ ದೂರು ನೀಡಲಾಗಿದೆ. ಆದರೆ ಸ್ಥಳಕ್ಕೆ ಭೇಟಿ ನೀಡುವ ಅರಣ್ಯ ಸಿಬ್ಬಂದಿಗಳು ಗಡಿ ತಕರಾರು ತೆಗೆದು ಕಾಡಾನೆ ನಮ್ಮ ಏರಿಯಾದಲ್ಲಿ ಇಲ್ಲವೆಂದು ಮರಳುತ್ತಿದ್ದಾರೆ. ಎರಡು ವಲಯಗಳ ಗಡಿ ಕಲಹದಿಂದಾಗಿ ಸ್ಥಳೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಕ್ಷಾಂತರ ರೂಪಾಯಿ ಬೆಳೆ ನಷ್ಟವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಡಿಕೇರಿ ತಾಲ್ಲೂಕಿನ ಹೊಸ್ಕೇರಿ ಗ್ರಾಮದ ದೋಲ್ಪಾಡಿ ಕುಟುಂಬದ ಬಾಲಸುಬ್ರಹ್ಮಣಿ, ರಮೇಶ್, ಶಶಿಕುಮಾರ್, ವೇದಾವತಿ ಮತ್ತಿತರರ ತೋಟಗಳಲ್ಲಿ ಕೆಲವು ದಿನಗಳ ಹಿಂದೆ ಬೀಡು ಬಿಟ್ಟಿದ್ದ ಸುಮಾರು 16 ಕಾಡಾನೆಗಳನ್ನು ಮಡಿಕೇರಿ ವಲಯ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಾಡಿಗಟ್ಟಿದ್ದರು. ಆದರೆ ಇವುಗಳಲ್ಲಿ ಒಂದು ಆನೆ ಮಾತ್ರ ದಿಕ್ಕು ತಪ್ಪಿ ಇಲ್ಲೇ ಉಳಿದುಕೊಂಡಿದ್ದು, ದಾಂಧಲೆಯಲ್ಲಿ ತೊಡಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಡಾನೆಗಳಿಗೆ ಯಾವುದೇ ಗಡಿಯ ಪರಿಮಿತಿ ಮತ್ತು ಅರಿವು ಕೂಡ ಇರುವುದಿಲ್ಲ. ಒಂದು ದಿನ ಮಡಿಕೇರಿ, ಮತ್ತೊಂದು ದಿನ ಸೋಮವಾರಪೇಟೆ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಅದು ನೀಡುವ ಉಪಟಳಿಂದ ಕಷ್ಟ, ನಷ್ಟವಾಗುತ್ತಿರುವುದು ಗ್ರಾಮಸ್ಥರಿಗೆ. ಆದ್ದರಿಂದ ಗಡಿ ಲೆಕ್ಕಾಚಾರ ನಡೆಸದೆ ತಕ್ಷಣ ಪುಂಡಾನೆಯನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಹೊಸ್ಕೇರಿ ಮತ್ತು ಅರೆಕಾಡು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
::: ಸೆರೆಯಾಗಲಿದೆ ಪುಂಡಾನೆ :::
ಈ ಗೊಂದಲದ ಬಗ್ಗೆ ಮಾತನಾಡಿರುವ ವನಪಾಲಕ ಕೂಡಕಂಡಿ ಸುಬ್ರಾಯ ಅವರು ನೆಲ್ಯಹುದಿಕೇರಿ, ಬೆಟ್ಟದಕಾಡು, ಅಭ್ಯತ್ ಮಂಗಲ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ದಾಂಧಲೆ ನಡೆಸುತ್ತಿರುವ ಪುಂಡಾನೆಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದು, ಸೆರೆ ಹಿಡಿಯಲು ಅನುಮತಿ ದೊರೆತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಧ್ಯದಲ್ಲಿಯೇ ಒಂಟಿ ಸಲಗದ ಸೆರೆ ಕಾರ್ಯಾಚರಣೆ ನಡೆಯಲಿದೆ ಎಂದು ಅವರು ಭರವಸೆ ನೀಡಿದ್ದಾರೆ.