ಪೊಲೀಸ್ ದರ್ಪ ಆರೋಪ : ಪ್ರಗತಿಪರ ಜನಾಂದೋಲನ ವೇದಿಕೆಯಿಂದ ಪ್ರತಿಭಟನೆ

ಮಡಿಕೇರಿ ಸೆ.14 : ಸಾಮಾಜಿಕ ಹೋರಾಟಗಾರ ಹಾಗೂ ಚಿಂತಕರೂ ಆದ ಕೆ.ಎಲ್.ಅಶೋಕ್ ಅವರನ್ನು ಕೆಲವು ಪೊಲೀಸ್ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಾರೆ ಎಂದು ಆರೋಪಿಸಿ ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಪ್ರಗತಿಪರ ಜನಾಂದೋಲನ ವೇದಿಕೆ ನಗರದಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ವೇದಿಕೆಯ ಪ್ರಧಾನ ಸಂಚಾಲಕ ವಿ.ಪಿ.ಶಶಿಧರ್, ಸಮಾಜಮುಖಿ ಚಿಂತಕರು ಹಾಗೂ ಸಂವಿಧಾನಬದ್ಧವಾಗಿ ಹೋರಾಟಗಳನ್ನು ನಡೆಸುವವರನ್ನು ಉದ್ದೇಶಪೂರ್ವಕವಾಗಿ ನಿಯಂತ್ರಿಸುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿದರು. ಕೆ.ಎಲ್.ಅಶೋಕ್ ಅವರು ಕುಟುಂಬದೊಂದಿಗೆ ತೆರಳುತ್ತಿದ್ದ ಸಂದರ್ಭ ಕೊಪ್ಪ ಠಾಣೆ ವ್ಯಾಪ್ತಿಯಲ್ಲಿ ತಮಗರಿವಿಲ್ಲದೆ ನಿರ್ಬಂಧಿತ ಪ್ರದೇಶದಲ್ಲಿ ವಾಹನವನ್ನು ನಿಲುಗಡೆಗೊಳಿಸಿದ್ದಾರೆ. ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿಯೊಬ್ಬರು ಕುಟುಂಬದ ಸದಸ್ಯರ ಸಮ್ಮುಖದಲ್ಲೇ ಅತ್ಯಂತ ಅಸಭ್ಯ ಪದಗಳಿಂದ ನಿಂದಿಸಿದ್ದು, ಇದನ್ನು ಖಂಡಿಸುವುದಾಗಿ ಹೇಳಿದರು.
ಅಧಿಕಾರಿ ದರ್ಪದಿಂದ ವರ್ತಿಸುವ ಮೂಲಕ ಓರ್ವ ಜನಪರ ಹೋರಾಟಗಾರನನ್ನು ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿದರು.
ಆಡಳಿತ ವರ್ಗದವರ ಕೈಗೊಂಬೆಗಳಾಗಿ ಬದುಕುವ ಅಧಿಕಾರಿಗಳ ವಿರುದ್ಧ ಕೊಡಗು ಪ್ರಗತಿಪರ ಜನಾಂದೋಲನ ವೇದಿಕೆ ನಿರಂತರ ಹೋರಾಟವನ್ನು ನಡೆಸಲಿದೆ ಎಂದರು.
ಕಾನೂನಿಗೆ ವಿರುದ್ಧವಾಗಿ ಒಬ್ಬ ಹೋರಾಟಗಾರನನ್ನು ಅವಮಾನಿಸಿ ಮಾನಸಿಕ ನೋವನ್ನು ನೀಡಿದ ಪೊಲೀಸ್ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶಶಿಧರ್ ಒತ್ತಾಯಿಸಿದರು.
ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಅಬೂಬಕ್ಕರ್, ಜೈ ಬೀಮ್ ಸಂಘಟನೆಯ ಅಧ್ಯಕ್ಷ ಕೆ.ಪಿ.ರಾಜೀವ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರಾ ಮೈನಾ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ಬುಡಕಟ್ಟು ಜನಾಂಗದ ಪ್ರಮುಖರಾದ ರಾಯ್ ಡೇವಿಡ್, ತುಳುವೆರ ಜನಪದ ಕೂಟದ ಅಧ್ಯಕ್ಷ ಪ್ರಭು ರೈ, ಮಡಿಕೇರಿ ನಗರ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ರವಿ ಗೌಡ, ಜನಪದ ಪರಿಷತ್‍ನ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ನಗರಸಭೆ ಮಾಜಿ ಸದಸ್ಯ ಕೆ.ಎಂ.ವೆಂಕಟೇಶ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ವಸಂತಭಟ್, ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ನವೀದ್ ಖಾನ್, ಜೆಡಿಎಸ್ ಪ್ರಮುಖರಾದ ಭರತ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

