ಡಾ.ಐ.ಮಾ.ಮುತ್ತಣ್ಣ ಮತ್ತು ಬಿ.ಡಿ.ಗಣಪತಿ ಶತಮಾನೋತ್ಸವ ಕಾರ್ಯಕ್ರಮ

14/09/2020

ಮಡಿಕೇರಿ ಸೆ.14 : ಜನರಲ್ಲಿ ಸಾಹಿತ್ಯಿಕ ಚಿಂತನೆ ಮತ್ತು ಆಸಕ್ತಿಯನ್ನು ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಮೇರು ಸಾಹಿತಿಗಳಾದ ಡಾ.ಐಚೆಟ್ಟಿರ ಮಾ.ಮುತ್ತಣ್ಣ ಮತ್ತು ಬಿ.ಡಿ.ಗಣಪತಿ ಅವರುಗಳ ಶತಮಾನೋತ್ಸವವನ್ನು ನ.22 ರಂದು ವಿರಾಜಪೇಟೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೇರ ದಿನೇಶ್ ಬೆಳ್ಳಿಯಪ್ಪ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವಾಮೆರ ಕೊಂಡಾಟ ಸಂಘಟನೆಯು ಐಚೆಟ್ಟಿರ ಮತ್ತು ಬಾಚಮಾಡ ಕುಟುಂಬಸ್ಥರ ಸಹಭಾಗಿತ್ವದಲ್ಲಿ ಶತಮಾನೋತ್ಸವವನ್ನು ವಿರಾಜಪೇಟೆಯ ರಾಜರಾಜೇಶ್ವರಿ ಸಭಾಂಗಣದಲ್ಲಿ ಆಯೋಜಿಸಿದೆ. ಇದರಲ್ಲಿ ಖ್ಯಾತ ಸಾಹಿತಿಗಳಾದ ಐ.ಮಾ.ಮುತ್ತಣ್ಣ ಮತ್ತು ಬಿ.ಡಿ.ಗಣಪತಿ ಅವರ ನೆನಪಿನಲ್ಲಿ ಸಾಹಿತ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆಂದು ಮಾಹಿತಿಯನ್ನಿತ್ತರು.
ಕೊಡವ, ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಹಲವಾರು ಶ್ರೇಷ್ಠ ಕೃತಿಗಳನ್ನು ರಚಿಸಿರುವ ಐ.ಮಾ.ಮುತ್ತಣ್ಣ ಹಾಗೂ ಹಲವಾರು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ ಬಿ.ಡಿ.ಗಣಪತಿಯವರು 1920 ರಲ್ಲಿ ಜನಿಸಿ ಈ ವರ್ಷಕ್ಕೆ ನೂರು ವರ್ಷಗಳು ಪೂರ್ಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಶತಮಾನೋತ್ಸವ ಸಮಾರಂಭವನ್ನು ನಡೆಸುವ ಮೂಲಕ ಸಾಹಿತ್ಯಿಕ ಕಂಪನ್ನು ನಾಡಿನೆಲ್ಲೆಗೆ ಪಸರಿಸುವ ಉದ್ದೇಶ ತಮ್ಮದೆಂದು ನುಡಿದರು.
ಶತಮಾನೋತ್ಸವದಂದು ಬೆಳಗ್ಗೆ 10.30 ಗಂಟೆಗೆ ಕೊಡವ ಪದ್ಧತಿಯಂತೆ ಕಾರೋಣರಿಗೆ ಅಕ್ಕಿ ಹಾಕುವ ಮೂಲಕ ಗೌರವ ಸಲ್ಲಿಸಲಾಗುತ್ತದೆ. ಬಳಿಕ ಸಾಹಿತಿಗಳ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ವೇದಿಕೆ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ಡಾ.ಐ.ಮಾ.ಮುತ್ತಣ್ಣ ಹಾಗೂ ಬಿ.ಡಿ.ಗಣಪತಿಯವರ ಬದುಕು, ಸಾಧನೆ, ಸಾಹಿತ್ಯದ ಕುರಿತು ವಿಚಾರ ಮಂಡನೆ, ಈರ್ವರು ಸಾಹಿತಿಗಳ ಕುರಿತು ಪುಸ್ತಕಗಳನ್ನು ಬರೆದಿರುವವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ಇಲ್ಲಿಯವರೆಗೆ ಇವರಿಬ್ಬರು ಸಾಹಿತಿಗಳ ಬಗ್ಗೆ ಪುಸ್ತಕಗಳನ್ನು ಬರೆದ ಇಬ್ಬರನ್ನು ಗುರುತಿಸಲಾಗಿದೆ ಎಂದರು.
ಖ್ಯಾತನಾಮ ಸಾಹಿತಿಗಳ ಶತಮಾನೋತ್ಸವ ಹಿನ್ನೆಲೆ ಪ್ರಸಕ್ತ ಸಾಲಿನ ಜೂನ್‍ನಿಂದ ತಿಂಗಳಿಗೊಂದು ಸಾಹಿತ್ಯ ಸ್ಪರ್ಧೆಯನ್ನು ಕೊಡವಾಮೆರ ಕೊಂಡಾಟ ಸಂಘಟನೆ ಆಯೋಜಿಸಿದ್ದು, ಇದರಲ್ಲಿ ವಿಜೇತರಾದ ಹಾಗೂ ಪಾಲ್ಗೊಂಡ 200 ರಿಂದ 300 ಮಂದಿಗೆ ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಲಾಗುತ್ತದೆಂದು ದಿನೇಶ್ ಬೆಳ್ಳಿಯಪ್ಪ ತಿಳಿಸಿದರು.
ವೇದಿಕೆಯಲ್ಲಿ ಹಿರಿಯ ಸಾಹಿತಿಗಳು ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಪುಸ್ತಕ ಮಾರಾಟ ಸೇರಿದಂತೆ ಹಲವಾರು ಸಾಹಿತ್ಯಾತ್ಮಕ ಕಾರ್ಯಕ್ರಮಗಳ ಜೊತೆಯಲ್ಲೆ ತ್ರಿಭಾಷಾ ಸಾಹಿತಿಗಳ ಕುರಿತ ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಲಾಗುತ್ತದೆ. ಈ ಎಲ್ಲಾ ಕಾರ್ಯಕ್ರಮಗಳು ಸರ್ಕಾರದ ಕೋವಿಡ್ ಮಾರ್ಗಸೂಚಿಗಳಿಗೆ ಒಳಪಟ್ಟು ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಐಚೆಟ್ಟಿರ ಕುಟುಂಬದ ಅಧ್ಯಕ್ಷ ಐಚೆಟ್ಟಿರ ಮೋಹನ್ ದೇವಯ್ಯ ಅವರು ಮಾತನಾಡಿ, ಶತಮಾನೋತ್ಸವ ಸಮಾರಂಭಕ್ಕೆ ಕುಟುಂಬದಿಂದ ಅಗತ್ಯವಾದ ಎಲ್ಲಾ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಬೊಟ್ಟೋಳಂಡ ಆರ್ಯನ್ ಚಂಗಪ್ಪ ಮಾತನಾಡಿ, ಹಿರಿಯ ಸಾಹಿತಿಗಳ ಸ್ಮರಣಾರ್ಥ ಕೊಡವಾಮೆರ ಕೊಂಡಾಟ ತಿಂಗಳಿಗೊಂದು ಸಾಹಿತ್ಯಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಇಂತಹ ಕಾರ್ಯಕ್ರಮ ಮುಂದುವರೆದುಕೊಂಡು ಹೋಗಬೇಕಾದ ಅಗತ್ಯವಿದೆ ಎಂದರು.
ಸಾಹಿತ್ಯ ನಮ್ಮೆಯ ಸಂಚಾಲಕ ಚೆರಿಯಪಂಡ ವಿಶು ಕಾಳಪ್ಪ ಮಾತನಾಡಿ, ಕಳೆ ದ ಜೂನ್ ನಿಂದ ಪ್ರತಿ ತಿಂಗಳು ಕೊಡವ ಭಾಷಾ ಕವನ, ಕಥೆ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಿಕೊಂಡು ಬರುವ ಮೂಲಕ ಯುವ ಸಮೂಹದ ಸಾಹಿತ್ಯಿಕ ಚಟುಚಟಿಕೆಗೆ ಪ್ರೋತ್ಸಾಹ ನೀಡುತ್ತಾ ಬಂದಿರುವುದಾಗಿ ತಿಳಿಸಿದರು. ಶತಮಾನೋತ್ಸವದ ಕುರಿತ ಹೆಚ್ಚಿನ ಮಾಹಿತಿಗಾಗಿ ಚಾಮೇರ ದಿನೇಶ್ ಬೆಳ್ಳಿಯಪ್ಪ ಮೊ. 94480778736, ವಿಶು ಕಾಳಪ್ಪ ಮೊ.9886732407 ನ್ನು ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಕೊಡವಾಮೆರ ಕೊಂಡಾಟದ ಕಾರ್ಯದರ್ಶಿ ಅಜ್ಜಮಕ್ಕಡ ವಿನು ಕುಶಾಲಪ್ಪ ಹಾಗೂ ಖಜಾಂಚಿ ಸಣ್ಣುವಂಡ ಕಿಶು ದೇವಯ್ಯ ಉಪಸ್ಥಿತರಿದ್ದರು.