ಶಾಂತಳ್ಳಿಯಲ್ಲಿ ಸಿ ಮತ್ತು ಡಿ ಜಾಗ ಒತ್ತುವರಿ : ಗ್ರಾಮದ ಇಬ್ಬರಿಗೆ ಅರಣ್ಯ ಇಲಾಖೆಯಿಂದ ಎಚ್ಚರಿಕೆ

September 14, 2020

ಮಡಿಕೇರಿ ಸೆ. 14 : ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯಲ್ಲಿ ಸಿ ಮತ್ತು ಡಿ ಜಾಗ ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಲು ಮುಂದಾಗಿದ್ದ ವ್ಯಕ್ತಿಗಳಿಗೆ ಅರಣ್ಯ ಇಲಾಖಾ ಅಧಿಕಾರಿಗಳು ತಡೆಯೊಡ್ಡಿದ ಘಟನೆ ಶನಿವಾರ ನಡೆದಿದೆ.
ಶಾಂತಳ್ಳಿ ವ್ಯಾಪ್ತಿಯಲ್ಲಿ ಸಿ ಮತ್ತು ಡಿ ಜಾಗದಲ್ಲಿ ಈ ಹಿಂದೆ ಅರಣ್ಯ ಇಲಾಖೆಯಿಂದ ಗಿಡಗಳನ್ನು ನೆಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಹಲವು ಈ ಜಾಗವನ್ನು ಒತ್ತುವರಿ ಮಾಡಿಕೊಂಡು ತೋಟ ಮಾಡಲು ಮುಂದಾಗುತ್ತಿದ್ದಾರೆ. ಅದರಂತೆ ಕಾಫಿ ತೋಟ ನಿರ್ಮಿಸಲು ಸಿ ಮತ್ತು ಡಿ ಜಾಗದಲ್ಲಿ ಕುರುಚಲು ಕಾಡನ್ನು ಕಡಿದು ಪಾನವಾಳ ನೆಡಲು ಮುಂದಾಗಿದ್ದ ಗ್ರಾಮದ ಕೃಷ್ಣಪ್ಪ, ಜಗದೀಶ್ ಅವರುಗಳಿಗೆ ಅರಣ್ಯ ಇಲಾಖೆ ತಡೆಯೊಡ್ಡಿದ್ದು, ಸ್ಥಳದ ಜಂಟಿ ಸರ್ವೆಗೆ ಮುಂದಾಗಿದೆ.
ಈ ಬಗ್ಗೆ ಸ್ಥಳೀಯ ನಿವಾಸಿ ಸುಮಾ ಎಂಬುವವರು ಸೋಮವಾರಪೇಟೆ ವಲಯ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರು. ಸ್ಥಳಕ್ಕೆ ತೆರಳಿದ ಗಾರ್ಡ್‍ಗಳಾದ ಕಿರಣ್, ವಿಶ್ವ, ವಾಚರ್ ರಮೇಶ್ ಅವರುಗಳು ಸಿ ಮತ್ತು ಡಿ ಜಾಗದಲ್ಲಿ ತೋಟ ಮಾಡಲು ಮುಂದಾಗಿದ್ದ ಸ್ಥಳದಲ್ಲಿ ನೆಟ್ಟಿದ್ದ ಪಾನವಾಳ ಗಿಡಗಳನ್ನು ಕಿತ್ತು, ಈರ್ವರಿಗೆ ಎಚ್ಚರಿಕೆ ನೀಡಿದರು.
ಸೆ.15ರಂದು ಸ್ಥಳಕ್ಕೆ ತೆರಳಿ ಇಲಾಖೆ ವತಿಯಿಂದ ಜಂಟಿ ಸರ್ವೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಇಲಾಖೆಯಿಂದ ಗಿಡಗಳನ್ನು ಬೆಳೆಸಲಾಗಿರುವ ಸರ್ಕಾರಿ ಜಾಗ ಒತ್ತುವರಿಯಾಗಿದ್ದರೆ, ತೆರವಿಗೆ ಕ್ರಮವಹಿಸಲಾಗುವುದು ಎಂದು ಡಿಆರ್‍ಎಫ್‍ಒ ರಾಕೇಶ್ ತಿಳಿಸಿದ್ದಾರೆ.