ಜಿ.ಪಂ. ಪ್ರಗತಿ ಪರಿಶೀಲನಾ ಸಭೆ : ಹಾಡಿಗಳಿಗೆ ಕನಿಷ್ಠ ಮೂಲ ಸೌಲಭ್ಯವನ್ನಾದರೂ ಕಲ್ಪಿಸಿ: ಸಚಿವ ವಿ.ಸೋಮಣ್ಣ ಸೂಚನೆ

14/09/2020

ಮಡಿಕೇರಿ ಸೆ.14 : ಜಿಲ್ಲೆಯ ಆದಿವಾಸಿ ಗಿರಿಜನರು ವಾಸಿಸುವ ಹಾಡಿಗಳಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮತ್ತಿತರ ಕನಿಷ್ಠ ಮೂಲ ಸೌಲಭ್ಯವನ್ನಾದರೂ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ತಿಳಿಸಿದರು.
ನಗರದ ಜಿ.ಪಂ.ಸಭಾಂಗಣದಲ್ಲಿ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಆದಿವಾಸಿ ಗಿರಿಜನರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳು ತಲುಪಿಲ್ಲ ಎಂದರೆ ಬೇಸರವಾಗುತ್ತದೆ. ಮೂಲ ಸೌಲಭ್ಯ ಕಲ್ಪಿಸುವುದಕ್ಕೆ ಯಾರೂ ಸಹ ತೊಂದರೆ ನೀಡಬಾರದು ಎಂದು ಖಡಕ್ಕಾಗಿ ಸಚಿವರು ಎಚ್ಚರಿಸಿದರು.
ಮೂಲ ಸೌಲಭ್ಯ ಕಲ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸಹಕಾರ ನೀಡದಿದ್ದರೆ ಶಾಸಕರು ಮತ್ತು ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಬೇಕು. ಗಿರಿಜನರು ಬದುಕಲು ಸಮಾನ ಅವಕಾಶ ನೀಡಬೇಕು. ಇನ್ನು ಎಷ್ಟು ವರ್ಷ ವಿದ್ಯುತ್ ಸಂಪರ್ಕ, ಕುಡಿಯುವ ನೀರು, ರಸ್ತೆ ಇಲ್ಲದೆ ಹಾಡಿಯ ಜನರು ಬದುಕಬೇಕು. ಅಧಿಕಾರಿಗಳಿಗೆ ನೋವು ಆಗುವುದಿಲ್ಲವೇ ಎಂದು ಸೂಚ್ಯವಾಗಿ ನುಡಿದರು.
ಬಡವರ ಕೆಲಸಕ್ಕೆ ದೊಡ್ಡಸ್ತಿಕೆ ತೋರಿಸುವುದು ಬೇಡ. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಬಡ ಜನರಿಗೆ ಕೈಲಾದಷ್ಟು ತಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಪ್ರತಿಷ್ಠೆ ತೋರುವುದು ಬೇಡ ಎಂದು ಸಚಿವರು ಸೂಚಿಸಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಸೌಭಾಗ್ಯ ಯೋಜನೆಯಡಿ ಜಿಲ್ಲೆಗೆ 16 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ ಪ್ರಗತಿ ಕಾಣುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಬಹಳ ಹಿಂದಿನಿಂದಲೂ ಕೋವಿ ಇಟ್ಟುಕೊಳ್ಳುವ ಪದ್ಧತಿ ಇದ್ದು, ಇತ್ತೀಚೆಗೆ ಪರವಾನಗಿಯನ್ನು ಸಕಾಲದಲ್ಲಿ ನೀಡುತ್ತಿಲ್ಲ ಎಂದು ಅವರು ದೂರಿದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕರಾದ ಅಪ್ಪಚ್ಚುರಂಜನ್ ಅವರು ಕೋವಿ ಇರುವವರಿಗೆ ನವೀಕರಣ ಮಾಡುತ್ತಿಲ್ಲ ಎಂದು ದೂರಿದರು.
ಇಂತಹ ವಿಚಾರಗಳನ್ನು ಜಿಲ್ಲಾಡಳಿತ ಶಾಸಕರ ಜೊತೆ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಕೋವಿ ಕಡತ ನಿರ್ವಹಿಸುವ ಸಿಬ್ಬಂದಿಗಳನ್ನು ಎರಡು ವರ್ಷಕ್ಕೆ ಒಮ್ಮೆಯಾದರೂ ವರ್ಗಾವಣೆ ಮಾಡಬೇಕು ಎಂದು ಅವರು ಸಲಹೆ ಮಾಡಿದರು.
ದೇವಸ್ಥಾನಗಳಿಗೆ ಬಿಡುಗಡೆಯಾಗುವ ಹಣ ಬಗ್ಗೆ ಅರಣ್ಯ ಇಲಾಖೆಗೆ ಪತ್ರ ಬರೆಯುವುದಾದರೂ ಏಕೆ ಎಂದು ಸಚಿವರಾದ ವಿ.ಸೋಮಣ್ಣ ಅವರು ಪ್ರಶ್ನಿಸಿದರು.

ಪ್ರಾಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಮನೆ ಕೊಡಿಸಲು ಶತಾಯಿಸುವ ಬಗ್ಗೆ ಜಿ.ಪಂ.ಉಪಾಧ್ಯಕ್ಷರೇ ದೂರು ನೀಡಿದ್ದಾರೆ. ಇಂತಹ ಸಿಬ್ಬಂದಿಗಳನ್ನು ಅಮಾನತು ಮಾಡಬೇಕು. ಬಡವರು ನೆಮ್ಮದಿಯಿಂದ ಜೀವನ ಮಾಡಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕು. ಅನಾವಶ್ಯಕವಾಗಿ ತೊಂದರೆ ನೀಡುವುದು ಬೇಡ ಎಂದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಬಜೆಗುಂಡಿಯಲ್ಲಿ ಮನೆ ನಿರ್ಮಾಣ ಕಾರ್ಯವಾಗಿಲ್ಲ. ಅಲ್ಲಿನ ಜನರು ತುಂಬಾ ಸಂಕಷ್ಟದಲ್ಲಿದ್ದಾರೆ. ಕನಿಷ್ಠ ಮೂಲ ಸೌಲಭ್ಯ ಕಲ್ಪಿಸಬೇಕಿದೆ ಎಂದು ಅವರು ತಿಳಿಸಿದರು.
‘ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕಡಮಕಲ್ಲು, ಕೂಟಿಯಾಲ, ಬಿಸಿಲೆ ಹಾಗೂ ತೊಡಿಕಾನ ರಸ್ತೆ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಪರ್ಯಾಯ ಜಾಗ ನೀಡಲಾಗಿದೆ. ಆದರೆ ಈ ರಸ್ತೆ ನಿರ್ಮಾಣ ಸಂಬಂಧ ಸರಿಯಾದ ಮಾಹಿತಿ ಒದಗಿಸದೆ ವಿಳಂಬ ಮಾಡುತ್ತಿರುವುದಾದರೂ ಏಕೆ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚುರಂಜನ್ ಅವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.’
ಈಗಾಗಲೇ ಕಡಮಕಲ್ಲು, ಕೂಟಿಯಾಲ, ಬಿಸಿಲೆ ರಸ್ತೆ ಸಂಬಂಧ ಪರ್ಯಾಯ ಜಾಗ ನೀಡಲಾಗಿದೆ. ಈ ಬಗ್ಗೆ ವನ್ಯಜೀವಿ ಮಂಡಳಿಗೆ ಸಮರ್ಪಕ ಮಾಹಿತಿಯನ್ನು ಲೋಕೋಪಯೋಗಿ ಇಲಾಖೆ ಒದಗಿಸಬೇಕಿದೆ ಎಂದು ಅವರು ಹೇಳಿದರು.
ಮಳೆ ಹಾನಿ ಸಂಬಂಧಿಸಿದಂತೆ ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ತಮ್ಮ ವ್ಯಾಪ್ತಿಯ ಕಾಮಗಾರಿಗಳನ್ನು ಕೈಗೊಳ್ಳುವಂತೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಸೂಚಿಸಿದರು.
ಮಡಿಕೇರಿ ನಗರಸಭೆಗೆ 9 ಕೋಟಿ ರೂ. ಬಿಡುಗಡೆಯಾಗಿದ್ದು, ಕಾಂಕ್ರೀಟ್ ರಸ್ತೆ ಕೈಗೊಳ್ಳಬೇಕು. ಕೋವಿಡ್-19 ಮತ್ತಿತರ ನೆಪ ಹೇಳುವುದನ್ನು ಯಾವುದೇ ಇಲಾಖೆ ಅಧಿಕಾರಿಗಳು ಬಿಡಬೇಕು. ಮಡಿಕೇರಿ ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ವಿನಿಯೋಗಿಸಬೇಕು ಎಂದು ಸಚಿವರು ಸೂಚಿಸಿದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಮಾತನಾಡಿ ಜಿಲ್ಲೆಯಲ್ಲಿ ಮಳೆಯಿಂದ ಸಾಕಷ್ಟು ರಸ್ತೆಗಳು ಹಾನಿಯಾಗಿದ್ದು, ರಸ್ತೆ ಗುಂಡಿ ಮುಚ್ಚುವ ಕಾರ್ಯವಾಗಬೇಕು ಎಂದು ಅವರು ಸೂಚಿಸಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಮಡಿಕೇರಿ ಮತ್ತು ಕುಶಾಲನಗರದಲ್ಲಿ ಒಳಚರಂಡಿ ಕಾಮಗಾರಿಯನ್ನು ಯಾಕಾಗಿ ಕೈಗೊಂಡವು ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಗ್ರಾ.ಪಂ. ಮಟ್ಟದಲ್ಲಿ ಮರಳು ಬ್ಲಾಕ್‍ಗಳನ್ನು ಗುರುತಿಸಬೇಕು ಎಂದು ಅವರು ಸೂಚಿಸಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಕುಂಡಾಮೇಸ್ತ್ರಿ ಯೋಜನೆ 30 ಕೋಟಿ ರೂ. ಆಗಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದರು.
ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ವಸತಿ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮರಳು ಅತ್ಯಗತ್ಯವಾಗಿದೆ. ಆದರೆ ಮರಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮರಳು ಬ್ಲಾಕ್ ಗುರುತಿಸುವ ಕೆಲಸ ಶೀಘ್ರ ಆಗಬೇಕಿದೆ. ಡಿಸೆಂಬರ್ ನಂತರ ಕಷ್ಟವಾಗಲಿದೆ. ಆದ್ದರಿಂದ ಸ್ವಂತ ಜಾಗದಲ್ಲಿ ಮರಳು ಬ್ಲಾಕ್‍ಗಳನ್ನು ಗುರುತಿಸುವಂತಾಗಬೇಕು ಎಂದು ಅವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಕೋವಿಡ್ ಸಂದರ್ಭದಲ್ಲಿ ಹಳ್ಳಿಗಳಿಗೆ ತೆರಳಿ ನೋಡಿದರೆ ದಿಗಿಲು ಉಂಟಾಗುತ್ತದೆ. ಗ್ರಾಮೀಣ ಜನರು ಯಾವ ರೀತಿ ಬದುಕು ದೂಡಬೇಕು ಎಂಬ ಬಗ್ಗೆ ಅರಿತುಕೊಂಡು ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಮರಳು ಬ್ಲಾಕ್ ಸಂಬಂಧಿಸಿದಂತೆ ಹಿರಿಯ ಭೂ ವಿಜ್ಞಾನಿ ರೇಷ್ಮ ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಯೂರಿಯಾ ಸೇರಿದಂತೆ ಯಾವುದೇ ರಸಗೊಬ್ಬರ ಕೊರತೆ ಉಂಟಾಗಬಾರದು. ಆ ನಿಟ್ಟಿನಲ್ಲಿ ಗಮನ ಹರಿಸುವಂತೆ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚುರಂಜನ್ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಪೊನ್ನಂಪೇಟೆ ಮತ್ತು ಕುಶಾಲನಗರ ತಾಲ್ಲೂಕು ರಚನೆ ಸಂಬಂಧಿಸಿದಂತೆ ಪ್ರಗತಿಯಲ್ಲಿದೆ ಎಂದು ಶಾಸಕರು ತಿಳಿಸಿದರು.
ನಿವೃತ್ತಿ ಸೈನಿಕರಿಗೆ ಭೂಮಿ ಸೇರಿದಂತೆ ಸರ್ಕಾರದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.
ಹಾಲು ಉತ್ಪಾದಕರಿಗೆ ಕಳೆದ ಜುಲೈ ತಿಂಗಳಿನಿಂದ ಹಣ ಪಾವತಿಯಾಗಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಕೂಡಲೇ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಭೂ ಪರಿವರ್ತನೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವಾಣಿಜ್ಯ ಉದ್ದೇಶಕ್ಕೆ ಸಂಬಂಧಿಸಿದಂತೆ 26 ಅರ್ಜಿಗಳು ಬಂದಿದ್ದು, 12 ಅರ್ಜಿಗಳಿಗೆ ಎನ್‍ಒಸಿ ನೀಡಲಾಗಿದೆ. 2 ಅರ್ಜಿಗಳು ಸಮರ್ಪಕ ಮಾಹಿತಿ ಒದಗಿಸಿಲ್ಲ ಎಂದು ತಿಳಿಸಿದರು.
ಕಾವೇರಿ ನೀರಾವರಿ ನಿಗಮದಿಂದ ತಲಕಾವೇರಿಯಿಂದ ನದಿ ಪಾತ್ರದಿಂದ ಗಡಿ ಗ್ರಾಮದವರೆಗೆ ಕಾಡು ಕಡಿಯುವ ಮತ್ತು ಹೂಳು ತೆಗೆಯುವ ಕಾರ್ಯ ಮಾಡಬೇಕು. ಇದರಿಂದ ಪ್ರವಾಹ ತಡೆಯಬಹುದು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ವಿರಾಜಪೇಟೆಯ ಅಯ್ಯಪ್ಪ ಬೆಟ್ಟ ಮತ್ತು ನೆಹರು ನಗರ ಕುಟುಂಬಗಳ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಸಚಿವರು ಭೂಮಿ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಎಕರೆಗೆ 15 ಲಕ್ಷ ರೂ. ನಂತೆ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.
ಈ ಬಗ್ಗೆ ಮಾಹಿತಿ ನೀಡಿದ ಪ.ಪಂ.ಮುಖ್ಯಾಧಿಕಾರಿ ಶ್ರೀಧರ್ ಅವರು ಅಯ್ಯಪ್ಪ ಬೆಟ್ಟ ಮತ್ತು ನೆಹರು ನಗರದ ಸುಮಾರು 367 ಕುಟುಂಬಗಳನ್ನು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಂಬೂರು, ಮದೆನಾಡು, ಕರ್ಣಂಗೇರಿಗಳಲ್ಲಿ ಈಗಾಗಲೇ ಸಂತ್ರಸ್ತರಿಗೆ ಮನೆ ಹಸ್ತಾಂತರಿಸಲಾಗಿದೆ. ಆದರೆ ಚಾಮುಂಡೇಶ್ವರಿ ನಗರದಲ್ಲಿಯೇ ಉಳಿದು ಎರಡು ಕಡೆ ವಾಸ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಮನೆ ಪಡೆದಿರುವ ಕುಟುಂಬಗಳು ಕೂಡಲೇ ಸ್ಥಳಾಂತರವಾಗಬೇಕು. ಈ ಬಗ್ಗೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಅಗತ್ಯ ಕ್ರಮ ವಹಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.
ಜಿಲ್ಲಾ ನ್ಯಾಯಾಲಯ ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಗಮನ ಸೆಳೆದರು.
ಈ ಬಗ್ಗೆ ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಇಇ ಮದನ್ ಮೋಹನ್ ಅವರು ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ ಕಾಮಗಾರಿ ಬಾಕಿ ಇದೆ ಎಂದು ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಕೋವಿಡ್-19 ಸಂಬಂಧಿಸಿದಂತೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಇದುವರೆಗೆ 33,127 ಕೋವಿಡ್ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 23,515 ಆರ್‍ಟಿಪಿಸಿಆರ್ ಪರೀಕ್ಷೆ ಮತ್ತು 9,612 ಆರ್‍ಇಟಿ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 1994 ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, 30,867 ಪ್ರಕರಣ ನೆಗೆಟಿವ್ ಬಂದಿದೆ. 327 ಸಕ್ರಿಯ ಪ್ರಕರಣಗಳಿದ್ದು, 83 ಮಂದಿ ಆಸ್ಪತ್ರೆಯಲ್ಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಕಾರ್ಯಪ್ಪ ಅವರು ತಜ್ಞ ವೈದ್ಯರ ಕೊರತೆ ಇದೆ ಎಂದು ತಿಳಿಸಿದರು. ಜಿಲ್ಲೆಯ ಅಂಗನವಾಡಿಗಳಿಗೆ ಜನತಾ ಬಜಾರ್ ಮೂಲಕ ಆಹಾರ ಪೂರೈಸುವಂತೆ ಸಚಿವರು ನಿರ್ದೇಶನ ನೀಡಿದರು.
ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳುವವರಿಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ 1 ಲಕ್ಷ ರೂ. ಪಡೆದ 116 ಕುಟುಂಬಗಳು ಅಡಿಪಾಯ ಕೂಡ ಹಾಕಿಲ್ಲ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ ಅತಿವೃಷ್ಟಿ ಸಂತ್ರಸ್ತರಿಗೆ ಪರ್ಯಾಯ ಜಾಗ ನೀಡಬೇಕು. ಕೊಡಗಿನ ಜನರು ತುಂಬಾ ತೊಂದರೆಯಲ್ಲಿದ್ದಾರೆ ಎಂದು ಅವರು ತಿಳಿಸಿದರು.
ತಾಲ್ಲೂಕು ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇರುವುದಿಲ್ಲ. ಈ ಬಗ್ಗೆ ಕ್ರಮವಹಿಸಬೇಕು ಎಂದು ಅವರು ಹೇಳಿದರು.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಆರ್.ಮಂಜುಳಾ ಅವರು ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೊಸಮನೆ ಕವಿತಾ ಪ್ರಭಾಕರ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಪ್ಪಂಡೇರಂಡ ಭವ್ಯ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಕ್ಷಮಾ ಮಿಶ್ರ, ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಡಿಸಿಎಫ್ ಗಳಾದ ಪ್ರಭಾಕರನ್, ಮಹೇಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು ಇತರರು ಇದ್ದರು.