ಅಪಾಯಕಾರಿ ಮನೆಗಳನ್ನು ಕೆಡವಲು ಕೊಡಗು ಉಸ್ತುವಾರಿ ಸಚಿವ ಸೋಮಣ್ಣ ಸೂಚನೆ

ಮಡಿಕೇರಿ ಸೆ.14 : ಮಳೆಹಾನಿ ಸಂತ್ರಸ್ತರಿಗೆ ಸರಕಾರದಿಂದ ನೂತನ ಮನೆ ನೀಡಿದ ಬಳಿಕವೂ ಕೆಲವರು ತಮ್ಮ ಹಿಂದಿನ ಅಪಾಯಕಾರಿ ಮನೆಗಳಲ್ಲಿ ವಾಸಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ವಿ.ಸೋಮಣ್ಣ ಅವರು, ಅಂತಹ ಅಪಾಯಕಾರಿ ಮನೆಗಳನ್ನು ಕೆಡವಿ ಹಾಕುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಮಳೆ ಹಾನಿ ಸಂತ್ರಸ್ತರಿಗೆ ಈಗಾಗಲೇ ಜಂಬೂರು, ಕೆ ನಿಡುಗಣೆ, ಮದೆನಾಡು ಸೇರಿದಂತೆ ವಿವಿಧಡೆ ಸರಕಾರದಿಂದ ಮನೆ ನಿರ್ಮಿಸಿ ಕೊಡಲಾಗಿದೆ. ಹೀಗಿದ್ದರೂ ಅನೇಕರು ಹಳೆಯ ಮನೆಗಳನ್ನು ತೆರವು ಮಾಡದೆ ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚು ರಂಜಾನ್ ಅವರುಗಳು ಸಭೆಯಲ್ಲಿ ಗಮನಸೆಳೆದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಸರ್ಕಾರದಿಂದ ನೂತನ ಮನೆ ನೀಡಿದ ಬಳಿಕವೂ ಅಪಾಯಕಾರಿ ಸ್ಥಿತಿಯಲ್ಲಿರುವ ಹಳೆಯ ಮನೆಗಳಲ್ಲಿ ವಾಸಿಸುತ್ತಿರುವುದು ಸರಿಯಲ್ಲ .ಕೂಡಲೇ ಸೂಕ್ಷ್ಮ ಪ್ರದೇಶಗಳಲ್ಲಿ ಇರುವ ಮನೆಗಳನ್ನು ಕೆಡವಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಿದರು.
ಬದಲಿ ಜಾಗ ನೀಡಲು ಕ್ರಮ: ವೀರಾಜಪೇಟೆಯ ಅಪಾಯಕಾರಿ ಅಯ್ಯಪ್ಪಬೆಟ್ಟದಲ್ಲಿ ವಾಸಿಸುತ್ತಿರುವವರಿಗೆ ಬದಲಿ ಜಾಗ ನೀಡಲು ಕ್ರಮ ಕೈಗೊಳ್ಳುವಂತೆಯೂ ಸಚಿವರು ಇದೇ ಸಂದರ್ಭ ಸೂಚಿಸಿದರು.
ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿ ಬಗ್ಗೆಯೂ ಸಚಿವರು ಮಾಹಿತಿ ಬಯಸಿದರು.
ಇದಕ್ಕುತ್ತರಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಜಿಲ್ಲೆಯಲ್ಲಿ ಈವರೆಗೂ 33,1273, ಕೋವಿಡ್-19 ಪರೀಕ್ಷೆ ನಡೆಸಲಾಗಿದೆ. ಆರ್.ಟಿ.ಪಿ.ಸಿ.ಆರ್ ಮುಖಾಂತರ 23,515 ಮತ್ತು ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ 9,612 ಮಂದಿಯನ್ನು ಪರೀಕ್ಷಿಸಲಾಗಿದೆ. ಈ ಪೈಕಿ 1994 ಪಾಸಿಟಿವ್ ವರದಿ ಬಂದಿದ್ದು, 30,868 ನೆಗೆಟಿವ್ ವರದಿ ಬಂದಿದೆ. 271 ವರದಿ ಬಾಕಿ ಇದ್ದು, 27 ಮಂದಿ ಕೋವಿಡ್-19 ನಿಂದಾಗಿ ಮೃತರಾಗಿದ್ದಾರೆ. ಎಂದು ವಿವರಿಸಿದರು.
ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಕಾರ್ಯಪ್ಪ ಅವರು ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದ್ದು, ಭರ್ತಿ ಮಾಡಬೇಕಿದೆ ಎಂದು ಗಮನ ಸೆಳೆದರು.